ಶ್ರಮಿಕ ವರ್ಗದ ಕ್ಷೇಮಕ್ಕಾಗಿ ಹಲವು ಯೋಜನೆ ಜಾರಿ : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

2 Min Read

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ (ಫೆ.07): ಶ್ರಮಿಕ ವರ್ಗದ ಕ್ಷೇಮಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಉತ್ತಮವಾದ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಅರ್ಹ ನೋಂದಾಯಿತ  ಕಟ್ಟಡ ಕಾರ್ಮಿಕರ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಶ್ರಮಿಕ್ ಟ್ಯಾಬ್ ಮತ್ತು 5ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಶಾಲಾ ಕಿಟ್ ವಿತರಿಸಿ ಅವರು ಮಾತನಾಡಿದರು.

ಇಂದಿನ ದುಬಾರಿ ವ್ಯವಸ್ಥೆಯಲ್ಲಿ ದುಡಿಯುವ ವರ್ಗದವರು ತಮ್ಮ  ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಕಷ್ಟಸಾಧ್ಯ. ಹಾಗಾಗಿ ಸರ್ಕಾರ ಶ್ರಮಿಕ ವರ್ಗದ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಟ್ಯಾಬ್ ಹಾಗೂ ಶಾಲಾ ಕಿಟ್ ವಿತರಿಸಲಾಗುತ್ತಿದ್ದು, ಇವುಗಳನ್ನು ಸದುಪಯೋಗಪಡಿಸಿಕೊಂಡು ಉನ್ನತಮಟ್ಟದ ಅಧಿಕಾರಿಗಳಾಗಬೇಕು ಎಂದು ಆಶಯವ್ಯಕ್ತಪಡಿಸಿದ ಅವರು, ಕಾರ್ಮಿಕರ ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರವು ಕಾರ್ಮಿಕರ ಹಿತರಕ್ಷಣೆಗಾಗಿ ಹಾಗೂ ಕಾರ್ಮಿಕರ ಮಕ್ಕಳಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಶೈಕ್ಷಣಿ ಧನ ಸಹಾಯ ಯೋಜನೆ, ಮದುವೆ ಸಹಾಯಧನ, ಹೆರಿಗೆ ಸಹಾಯಧನ, ಅಪಘಾತ ಸಂಭವಿಸಿದಾಗ ಪರಿಹಾರ, ಜೀವವಿಮೆ ಸೇರಿದಂತೆ ಇನ್ನಿತರೆ ಹಲವು ಸೌಲಭ್ಯಗಳನ್ನು ಕಾರ್ಮಿಕರಿಗೆ ಹಾಗೂ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದೆ ಎಂದರು.

ಕೋವಿಡ್ ಸಂದರ್ಭದಲ್ಲಿ ಕೆಲಸವಿಲ್ಲದೇ ಕಾರ್ಮಿಕರು ಬಹಳ ಕಷ್ಟ ಅನುಭವಿಸಿದರು. ಅಂತಹ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಆಹಾರ ಧಾನ್ಯದ ಕಿಟ್ ನೀಡಿ ನೆರವು ನೀಡಲಾಯಿತು. ದೇಶ ಕಟ್ಟುವುದರಲ್ಲಿ ಹಾಗೂ ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರು ಹಾಗೂ ಮಕ್ಕಳ ಪಾತ್ರ ಬಹುಮುಖ್ಯ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಅರ್ಹ ನೋಂದಾಯಿತ  ಕಟ್ಟಡ ಕಾರ್ಮಿಕರ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ 53 ಶ್ರಮಿಕ್ ಟ್ಯಾಬ್, 5ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ 300 ಶಾಲಾ ಕಿಟ್‍ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಚಿತ್ರದುರ್ಗ ತಾಲ್ಲೂಕು ಕಾರ್ಮಿಕ ನಿರೀಕ್ಷಕ ಡಿ.ರಾಜಣ್ಣ, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ನಾಗರಾಜ್, ಕಾರ್ಮಿಕರ ಸಂಘದ ಮುಖಂಡರಾದ ರಮೇಶ್, ವೆಂಕಟೇಶಪ್ಪ, ಟಿ.ಚಂದ್ರಪ್ಪ, ನಾಗರಾಜ್, ಮೈಲಾರಪ್ಪ, ಗಂಗಮ್ಮ, ಖಾಸಿಂ ಸೇರಿದಂತೆ ಕಾರ್ಮಿಕರ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕಟ್ಟಡ ಕಾರ್ಮಿಕರು ಹಾಗೂ ಮಕ್ಕಳು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *