ತುಮಕೂರು: ಇಂದು ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಿದ್ದು, ಗುಬ್ಬಿ ತಾಲೂಕಿನ ನಿಟ್ಟೂರು ಬಳಿ ಇರುವ ಹೆಚ್ಎಎಲ್ ಹೆಲಿಕಾಪ್ಟರ್ ಘಟಕವನ್ನು ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಕನ್ನಡದಲ್ಲಿಯೇ ಮಾತು ಆರಂಭಿಸಿದ ಪ್ರಧಾನಿ ಮೋದಿ, ತುಮಕೂರು ಜಿಲ್ಲೆ, ಗುಬ್ಬಿ ತಾಲೂಕಿನ ನಿಟ್ಟೂರಿನ ಬಂಧುಗಳಿಗೆ ನಮಸ್ಕಾರಗಳು. ಸಿದ್ದಗಂಗಾ ಶ್ರೀಗಳು ತ್ರಿವಿಧ ದಾಸೋಹ ನಡೆಸಿಕೊಂಡು ಬಂದವರು, ಅನ್ನ, ಅಕ್ಷರ, ಆಶ್ರಯ ಕೊಟ್ಟವರು. ಈಗ ತ್ರಿವಿಧ ದಾಸೋಹವನ್ನು ಸಿದ್ಧಲಿಂಗ ಸ್ವಾಮೀಜಿಗಳು ಮುಂದುವರೆಸಿದ್ದಾರೆ ಎಂದಿದ್ದಾರೆ.
ರಕ್ಷಣಾವಲಯದಲ್ಲಿ ಹೆಚ್ಎಎಲ್ ಆತ್ಮನಿರ್ಭರಕ್ಕೆ ಬಲ ಕೊಡುತ್ತದೆ. ಡಬಲ್ ಇಂಜಿನ್ ಪ್ರಾಮಾಣಿಕ ಪ್ರಯತ್ನದಿಂದ ಜನರ ವಿಶ್ವಾಸ ಹೆಚ್ಚಾಗಿದೆ ಎಂದಿದ್ದಾರೆ. ಕರ್ನಾಟಕ ಯುವ ಟ್ಯಾಲೆಂಟ್, ಯುವ ಅನ್ವೇಷಣೆಯ ನೆಲ. ಡ್ರೋಣ್ ನಿಂದ ತೇಜಸ್ ನಿರ್ಮಾಣದ ತನಕ ರಾಜ್ಯದ ಪ್ರತಿಭೆಯನ್ನು ಜಗತ್ತು ನೋಡುತ್ತಿದೆ. ಡಬಲ್ ಎಂಜಿನ್ ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಹೆಲಿಕಾಪ್ಟರ್ ಉತ್ಪಾದನ ಘಟಕವೂ ಒಂದು ನಿದರ್ಶನ.
ಈ ಘಟಕದ ಶಿಲನ್ಯಾಸ ಮಾಡುವ ಸೌಭಾಗ್ಯ ನನ್ನದಾಗಿತ್ತು. ಹಲವು ರಕ್ಷಣಾ ಸಾಮಗ್ರಿಗಳು ಭಾರತದಲ್ಲಿಯೇ ತಯಾರಾಗುತ್ತಿದೆ. 2014ಕ್ಕೂ ಮುನ್ನ ಹೇಗಿತ್ತು ಅಂತ ನೆನಪಿದೆಯಾ..? ಮುಂಚಿನ 15 ವರ್ಷ ಏರೋಸ್ಪೇಸ್ ನಲ್ಲಿ ತಯಾರಾಗಿದ್ದ ರಕ್ಷಣಾ ಸಾಮಾಗ್ರಿಗಳ ಐದು ಪಟ್ಟು ಕಳೆದ ಎಂಟು ವರ್ಷಗಳಲ್ಲಿ ತಯಾರಾಗಿದೆ. ಈ ಘಟಕದಲ್ಲಿ ಯುದ್ಧ ಹೆಲಿಕಾಪ್ಟರ್ ಗಳ ತಯಾರಿಕೆಯೂ ಆಗಲಿದೆ. ನಮ್ಮ ಸೇನೆಗೆ ಮತ್ತಷ್ಟು ಬಲವನ್ನು ಈ ಘಟಕ ತುಂಬಲಿದೆ ಎಂದಿದ್ದಾರೆ.