ಕಲಬುರಗಿ: ಇಂದು ಪ್ರಧಾನಿ ಮೋದಿ ರಾಜ್ಯಕ್ಕೆ ಬಂದಿದ್ದು, ಹಲವು ಅಭಿವೃದ್ದಿ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ. ಅದರ ಜೊತೆಗೆ ಗುಬ್ಬಿಯಲ್ಲಿ ನಿರ್ಮಾಣಗೊಂಡಿರುವ HAL ಘಟಕವನ್ನು ಉದ್ಘಾಟನೆ ಮಾಡಲಿದ್ದಾರೆ. ಈ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇದೀಗ ವ್ಯಂಗ್ಯವಾಡಿದ್ದಾರೆ. ಯುಪಿಎ ಅವಧಿಯಲ್ಲಿ ಜಾರಿಯಾಗಿದ್ದ ಯೋಜನೆಗಳಿಗೆ ಮೋದಿ ಅವರು ಈಗ ಚಾಲನೆ ನೀಡುವ ಮೂಲಕ, ಪ್ರಚಾರ ಪಡೆಯುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ನಗರದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮೋದಿ ಯಾವಾಗಲೂ ಹಾಗೆ. ನಾವೂ ಮಾಡಿದ ಕೆಲಸವನ್ನೇ ಉದ್ಘಾಟನೆ ಮಾಡುತ್ತಾರೆ. ನಾವೂ ಮಾಡಿದ ಅಡುಗೆಯನ್ನೇ ಮೋದಿ ಬಡಿಸುತ್ತಿದ್ದಾರೆ. ಲಂಬಾಣಿ ಜನರಿಗೆ ಕಂದಾಯ ಗ್ರಾಮ ಮಾಡಿರುವುದು ನಾವು, ಕಾನೂನು ಮಾಡಿರುವುದು ನಾವೂ, ಈಗ ಹಕ್ಕು ಪತ್ರ ಕೊಡಲು ಮೋದಿಯವರನ್ನು ಕರೆದುಕೊಂಡು ಬಂದಿದ್ದರು. ನಾವೂ ಅಡುಗೆ ಮಾಡುತ್ತೀವಿ, ಅವರು ಬಂದು ಬಡಿಸ್ತಾರೆ ಎಂದಿದ್ದಾರೆ.
ರಾಜ್ಯ ಬಿಜೆಪಿಗೆ ಮೋದಿಯೇ ಬಂಡವಾಳ. ಯಾಕಂದ್ರೆ ಏನು ಕೆಲಸ ಮಾಡಿಲ್ಲವಲ್ಲ. ಇದು ಜನ ವಿರೋಧಿ ಸರ್ಕಾರ. 40% ಸರ್ಕಾರ. ಪ್ರಧಾನಿ ಬಂದರೆ ವೋಟ್ ಬರುತ್ತೆ ಎಂದುಕೊಂಡಿದ್ದಾರೆ ಬಿಜೆಪಿ ನಾಯಕರು. ಆದ್ರೆ ಜನ ಈಗಾಗಲೇ ನಿರ್ಧಾರ ಮಾಡಿದ್ದಾರೆ. ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಎಂದಿದ್ದಾರೆ.