Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಫೆಬ್ರವರಿ 07 ರಂದು ತುರುವನೂರು ಶ್ರೀ ಆಂಜನೇಯಸ್ವಾಮಿ ಉಚ್ಛಾಯ : ಜಾತ್ರೆಯ ಹಿನ್ನೆಲೆ ಮತ್ತು ವಿಶೇಷತೆ…!

Facebook
Twitter
Telegram
WhatsApp

ಸುದ್ದಿಒನ್

  • ತುರುನೂರು ಶ್ರೀ ಆಂಜನೇಯ ಸ್ವಾಮಿ ಉಚ್ಛಾಯ ರಾಜ್ಯದಲ್ಲಿಯೇ ಖ್ಯಾತಿ
  • 125 ವರ್ಷದ ತೇರಿಗೆ ವಿದಾಯ
  • 20 ಲಕ್ಷ ರೂ. ವೆಚ್ಚದಲ್ಲಿ ಹೊಸ ತೇರು ನಿರ್ಮಾಣ
  • ಉಚ್ಛಾಯಕ್ಕೆ ಈಚಲು ಚಳುವಳಿ ಗ್ರಾಮ ಸಜ್ಜು

ಚಿತ್ರದುರ್ಗ, (ಫೆ.06), :  ತಾಲ್ಲೂಕಿನ
ತುರುವನೂರು ಎಂದಾಕ್ಷಣ ನಮಗೆ ನೆನಪಿಗೆ ಬರುವುದು ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನೇತಾರರು. ಈಚಲು ಮರಗಳನ್ನು ಕಡಿಯುವ ಮೂಲಕ ಬ್ರಿಟಿಷರ ತೆರಿಗೆ ನೀತಿ ಖಂಡಿಸಿ ಹೋರಾಟ ನಡೆಸಿದ ರೀತಿ ದೇಶದಲ್ಲಿಯೇ ಖ್ಯಾತಿ ಗಳಿಸಿದೆ.

ನೂರಾರು ಸಂಖ್ಯೆಯಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸೇನಾನಿಗಳನ್ನು ಕೊಡುಗೆ ನೀಡಿದ ಊರು ತುರುವನೂರು. ಎಸ್.ನಿಜಲಿಂಗಪ್ಪ ರಾಷ್ಟ್ರನಾಯಕರಾಗಿ ಚಳುವಳಿ ಮೂಲಕ ಗುರುತಿಸಿಕೊಳ್ಳಲು ತುರುವನೂರಲ್ಲಿ ನಡೆದ ಈಚಲು ಚಳವಳಿ ಪ್ರಮುಖ ಬುನಾದಿ ಆಗಿದೆ.

ಚಳವಳಿ, ಹೋರಾಟದ ಊರು ತುರುವನೂರು ಗ್ರಾಮ ಧಾರ್ಮಿಕ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದೆ ಎಂಬುದು ವಿಶೇಷ. ಇಲ್ಲಿ ಪ್ರತಿ ವರ್ಷ ನಡೆಯುವ ಆಂಜನೇಯ ರಥೋತ್ಸವ ರಾಜ್ಯದಲ್ಲಿಯೇ ಖ್ಯಾತಿ ಗಳಿಸಿದೆ.

ನೂರಾರು ವರ್ಷಗಳಿಂದ ಈ ಉತ್ಸವ ಆಚರಿಸಿಕೊಂಡು ಬರುತ್ತಿದ್ದು, ಈ ಬಾರಿ ಫೆ.7, 2023 ನಡೆಯಲಿರುವ ರಥೋತ್ಸವ ಬಹಳಷ್ಟು ವಿಶೇಷತೆ ಪಡೆದುಕೊಂಡಿದೆ.
ಅಂದಾಜು 125 ವರ್ಷಗಳ ಹಳೇ ತೇರಿಗೆ ವಿದಾಯ ಹೇಳಿ, ಅಂದಾಜು 20 ಲಕ್ಷ ರೂಪಾಯಿ ವೆಚ್ಚದಲ್ಲಿ ಮಾಡಲಾಗಿರುವ ಹೊಸ ತೇರು ಈ ಬಾರಿಯ ಜಾತ್ರೆಯ ವಿಶೇಷ. ಎರಡು ವರ್ಷ ಕರೋನಾ ಸೋಂಕು ಕಾರಣಕ್ಕೆ ಜಾತ್ರೆಯ ವೈಭವಕ್ಕೆ ಕಡಿವಾಣ ಬಿದ್ದಿತ್ತು. ಈಗ ಕರೋನಾ ಸೋಂಕು ಭೀತಿ ಮರೆಯಾಗಿದ್ದು, ಜೊತೆಗೆ 20 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಂದರ ತೇರು ಸಿದ್ಧಗೊಂಡಿದ್ದು, ಇಡೀ ಊರು ಈ ಬಾರಿಯ ಉತ್ಸವದ ಕ್ಷಣಗಣನೆಗೆ ಉತ್ಸಾಹದಿಂದ ಕಾದು ಕುಳಿತಿದೆ.

ವಿಶೇಷ : ತೇರು ನಿರ್ಮಾಣ ಕಾರ್ಯಕ್ಕೆ ಈ ಬಾರಿ ಯಾವುದೇ ರೀತಿ ದೇಣಿಗೆ ಸಂಗ್ರಹಿಸಲು ದೇವಸ್ಥಾನದ ಸಮಿತಿಯವರು ಮುಂದಾಗಿಲ್ಲ. ಆದರೆ, ಸಾಕ್ಷಾತ್ ಶ್ರೀ ಆಂಜನೇಯಸ್ವಾಮಿಯ ಕೃಪೆಯಿಂದ ಭಕ್ತರೇ ಮುಂದೆ ಬಂದು ದೇಣಿಗೆ ನೀಡಿ ದೇವರಿಗೆ ಭಕ್ತಿ ಅರ್ಪಿಸಿರುವುದು ವಿಶೇಷ.

ಹಳೇಯ ತೇರು ಸಾದಾವಾಗಿದ್ದು, ಹಳೆಯದಾಗಿದೆ.  ಈಗ ತಯಾರಾಗಿರ ಹೊಸ ತೇರು ಕಲಾವಿದನ ಕೈಚಳಕಕ್ಕೆ ಸಾಕ್ಷಿಯಂತೆ ರೂಪಿತಗೊಂಡಿದೆ. ಎಂಟು ಆನೆಗಳು, ಶಂಕು ಚಕ್ರ, ಸೊಂಟಪಟ್ಟಿ, ವಿನ್ಯಾಸದಲ್ಲಿ ಗಮನಸೆಳೆಯುವ ಕಂಬಗಳು, ಕಮಾನು ಹೀಗೆ ವಿವಿಧ ರೀತಿಯಲ್ಲಿ ಹೊಸ ತೇರು ಮಾಡಲಾಗಿದೆ.

ನಾಯಕನಹಟ್ಟಿಯ ತಿಪ್ಪೇಸ್ವಾಮಿಯವರ ನೇತೃತ್ವದಲ್ಲಿ ತಿಪ್ಪಾರೆಡ್ಡಿ, ಧನೇಶ್ ಕುಮಾರ್, ಓಂಕಾರಪ್ಪ ಇವರುಗಳು ಸತತ ಮೂರು ತಿಂಗಳ ಪರಿಶ್ರಮದಿಂದ ಕಾಲ ತೇರು ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಸಂಪೂರ್ಣ ಸಿದ್ಧಪಡಿಸಿದ್ದಾರೆ.

21 ಅಡಿ ಎತ್ತರದ ತೇರು ಕಲಾವಿದನ ಕೈಚಳಕದಲ್ಲಿ ರೂಪಗೊಂಡಿದ್ದು, ವಿವಿಧ ರೀತಿಯ ವಿನ್ಯಾಸಗಳು ಭಕ್ತರ ಕಣ್ಮನ ಸೆಳೆಯುತ್ತಿದೆ.

ಜಿಲ್ಲೆಯಲ್ಲಿ ನಡೆಯುವ ನಾಯಕನಹಟ್ಟಿ ಜಾತ್ರೆ ರಾಜ್ಯದಲ್ಲಿಯೇ ದೊಡ್ಡ ಉತ್ಸವ ಎಂಬ ಹೆಗ್ಗಳಿಕೆ ಪಡೆದಿದ್ದರೆ, ತುರುವನೂರು ಆಂಜನೇಯ ರಥೋತ್ಸವ ಕೂಡ ರಾಜ್ಯದ ಗಮನಸೆಳೆಯುತ್ತದೆ. ಅದರಲ್ಲೂ ರಾಜ್ಯದ ವಿವಿದೆಡೆಯಿಂದ ಭಕ್ತರು ಪಾಲ್ಗೊಳ್ಳುವುದು ವಿಶೇಷ. ಹೊಸದಾಗಿ ಸಿದ್ಧವಾಗಿರುವ ತೇರು ಊರಿನ ಕಳಶದಂತೆ ಕಂಗೊಳಿಸುತ್ತಿದೆ.

ಬಹಳಷ್ಟು ಮಂದಿ ಹೊರ ಜಿಲ್ಲೆ, ಹೊರ ರಾಜ್ಯದಲ್ಲಿದ್ದರೂ ತಪ್ಪದೇ ತುರುವನೂರು ಆಂಜನೇಯ ಜಾತ್ರೆಗೆ ಆಗಮಿಸಿ ಭಕ್ತಿ ಸಮರ್ಪಿಸುತ್ತಾರೆ.


ದಾಸಪ್ಪನ ಪವಾಡ : ಆಂಜನೇಯ  ಜಾತ್ರೆ ಮತ್ತು ದಾಸಪ್ಪನ ಪವಾಡ ವಿಶೇಷತೆಯುಳ್ಳದ್ದಾಗಿದೆ. ಹಾಗಾಗಿಯೇ ಸುತ್ತಮುತ್ತಲಿನಿಂದ ಸಹಸ್ರಾರು ಸಂಖ್ಯೆಯಲ್ಲಿ ದಾಸಪ್ಪನ ಪವಾಡವನ್ನು ವೀಕ್ಷಿಸಲು ತುರುವನೂರಿಗೆ ಸಾಗರದಂತೆ ಬಂದು ಸೇರುತ್ತಾರೆ. ಮಾಘಮಾಸದ ಮಘಾನಕ್ಷತ್ರದಲ್ಲಿ ನಡೆಯುವ ಈ ಉತ್ಸವ ವಿಶಿಷ್ಟವಾದದ್ದು.

ಇತಿಹಾಸ : ರಾಮಭಕ್ತ ಆಂಜನೇಯ ತನ್ನ ಭಕ್ತೆ ನಾಗಮ್ಮ ಎಂಬುವರನ್ನು ಊರಿನ ಅರಳಿ ಮರದ ಕೆಳಗೆ ಬಿಟ್ಟು ಹೋಗಿದ್ದ. ಆತನ ಅಪ್ಪಣೆಯಂತೆಯೇ ಆಕೆಯು ಅರಳಿ ಮರದ ಕೆಳಗಡೆ  ನೆಲೆಸಿದ್ದಳು. ಪುರಾಣದ ಪ್ರಕಾರ ಆಂಜನೇಯನೆ ಆಕೆಯನ್ನು ಅಲ್ಲಿ ಬಿಟ್ಟುಹೋಗಿದ್ದ. ಹಾಗಾಗಿ ಆಕೆ ದಿನ ಬೆಳಗ್ಗೆ ಅರಳಿ ಮರದ ಕೆಳಗಡೆ  ರಂಗೋಲಿಯಲ್ಲಿ ಆಂಜನೇಯನ ಚಿತ್ರ ಬಿಡಿಸುತ್ತಿದ್ದಳು. ನಂತರ ಅದೇ ಸ್ಥಳದಲ್ಲಿ  ಪೂಜೆಯನ್ನು ನೆರವೇರಿಸುತ್ತಿದ್ದಳು,  ಊರಿನವರ ಸಹಕಾರದಿಂದ ಚಿಕ್ಕದಾದ ಆಂಜನೇಯನ ಮೂರ್ತಿ ಸ್ಥಾಪನೆಯಾಯಿತು. ಹಾಗಾಗಿ ಮಹಾ ಶರಣೆ ನಾಗಮ್ಮ ಪ್ರತಿದಿನ ಅದಕ್ಕೆ ಪೂಜೆ ಮಾಡಿಕೊಂಡು ಇದ್ದಳು ಎನ್ನುವ ಪ್ರತೀತಿ ಇದೆ. ನಂತರ ಊರಿನ ಪ್ರಮುಖರೆಲ್ಲರೂ ಸೇರಿ ಕ್ರಿ.ಶ 1668ರಲ್ಲಿ  ನಾಗಮ್ಮನ ಆಸೆಯಂತೆ ಆಂಜನೇಯ ಮೂರ್ತಿ ಪ್ರತಿಷ್ಠಾಪಿಸಲು ನಿಶ್ಚಿಯಿಸಿದರು.

ಮೂರ್ತಿ ಸಿದ್ಧವಾದ ನಂತರ ಕಿ.ಶ.1669ರಲ್ಲಿ ಆಂಜನೇಯ ಪಾದಸ್ಪರ್ಶ ಮಾಡಿದ್ದ ಸ್ಥಳದಲ್ಲೇ ಕೀಲಕನಾಮ ಸಂವತ್ಸರ ಮಾಘಮಾಸದ ಮಾಘಾನಕ್ಷತ್ರದಲ್ಲಿ ಗದ್ದುಗೆಯ ಮೇಲೆ ಮರ‍್ತಿಯನ್ನು  ಪ್ರತಿಸ್ಠಾಪಿಸಲಾಯಿತು. ನಂತರ ಮೂಲ ಗದ್ದುಗೆಯನ್ನೇ ಇಟ್ಟುಕೊಂಡು  ದೇವಸ್ಥಾನವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗಿದೆ.
ಆಂಜನೇಯ ಸ್ವಾಮಿ ಜಾತ್ರೆಯನ್ನು ಮೂರ್ತಿ  ಪ್ರತಿಷ್ಠಾಪನೆಯ ದಿನದಂದೇ  ಮಾಘಮಾಸದ ಮಾಘಾನಕ್ಷದಲ್ಲೇ ಇಂದಿಗೂ ನಡೆದುಕೊಂಡು ಬರುತ್ತಿದೆ.

ಈ ಉತ್ಸವದ ಜೊತೆ  ಜೊತೆಯಲ್ಲಿ ಆರಂಭವಾಗಿದ್ದು ದಾಸಪ್ಪ ಪವಾಡ. ಇದು ನಿಜಕ್ಕೂ ಒಂದು ಪವಾಡವೇ ಸರಿ. ಗ್ರಾಮದ ಮುರುಡಪ್ಪ ಎಂಬ ಬಾಲಕನಿಗೆ ಆಗಾಗ ಆಂಜನೇಯ  ಕನಸಿನಲ್ಲಿ ಬರುತ್ತಿದ್ದು, ಈ ಕಾರಣಕ್ಕಾಗಿಯೇ ಆಗಾಗ ಆತ ಮೈಮೇಲೆ  ಪರವೇ ಇಲ್ಲದಂತೆ ಧ್ಯಾನಾಸಕ್ತನಾಗಿ ಕೂರುತ್ತಿದ್ದ.

ಸಹಜವಾಗಿಯೇ ಆತ ಆಂಜನೇಯನ ಪರಮ ಭಕ್ತನಾಗಿದ್ದ. ಆಂಜನೇಯ ಆತನ ದೇಹ ಪ್ರವೇಶಿಸುವ ಮೂಲಕ ಈ ರೀತಿಯ  ಧ್ಯಾನಸಕ್ತನಾಗಿ ಕೂರುತ್ತಿದ್ದ. ಹೀಗಾಗಿ ಆತನ ತಂದೆ ಇದನ್ನು ಕಂಡು ದಿಗಲಾಗಿದ್ದ. ಈ ಬಗ್ಗೆ  ಊರಿನ ಕೆಲ ಹಿರಿಯರ ಮೊರೆ ಹೋಗಿದ್ದ. ಹಿರಿಯೆರೆಲ್ಲರೂ ಆತನಲ್ಲಿದ್ದ ಭಕ್ತಿ ಶ್ರದ್ಧೆಯನ್ನು ಕಂಡು ನಿನ್ನ ಮಗನಿಗೆ ಏನು ಆಗಿಲ್ಲ, ದೈವಪ್ರೇರಣೆಯಾಗಿದೆ ಶ್ರೀರಾಮನ ಪರ್ವ ಅವತಾರವಾದ ಉಗ್ರನರಸಿಂಹನ ಸೇವೆ ಮಾಡಬೇಕೆಂದು ಆಂಜನೇಯ ನಿನ್ನ ಮಗನಲ್ಲಿ ಪ್ರೇರಣೆ ನೀಡಿದ್ದಾನೆ. ಹಾಗಾಗಿ ಆದಷ್ಟು ಬೇಗ ಮುರುಡಪ್ಪನಿಗೆ ವೈಷ್ಣವ ಮುದ್ರೆ ಹಾಕಿಸಿ ಆಂಜನೇಯನ ದಾಸನನ್ನಾಗಿ ಮಾಡು ಆತ ಆಂಜನೇಯನ ಸೇವಕನಾಗಿ ಪವಾಡಗಳನ್ನು ಮಾಡುತ್ತಾನೆ ಎಂದಾಗ ಮುರುಡಪ್ಪನಲ್ಲಿರುವ ಆ ಶಕ್ತಿಯ ಅರಿವಾಗುತ್ತದೆ.

ಆತ ಕೂಡಲೇ 1908 ರಲ್ಲಿ  ತಿರುಪತಿಗೆ ಹೋಗಿ ಮುದ್ರೆ ಹಾಕಿಸಿಕೊಂಡು ಬರುತ್ತಾನೆ. ಆ ನಂತರ  ಮತ್ತೆ ಆಂಜನೇಯ  ಮುರುಡಪ್ಪ ಕನಸಿನಲ್ಲಿ ಆಂಜನೇಯ ಬಂದು ಈಗಲಾದರೂ ನನ್ನ ಸೇವೆ ಮಾಡುತ್ತೀಯ ಎಂದು ಕೇಳಿದಾಗ, ಈಗ ನಾನೇನು ಮಾಡಬೇಕು  ಎಂದು ಮುರುಡಪ್ಪ ಕೇಳುತ್ತಾನೆ. ಆಗ ಆಂಜನೇಯ ಈ ಊರಿನ ಪರ‍್ವದಲ್ಲಿರುವ ಉಗ್ರನರಸಿಂಹ ಜನಸಿದ್ದಾನೆ. ಅಲ್ಲಿಗೆ ಹೋಗಿ ನನ್ನ ಸೇವೆ ನಡೆಯಬೇಕು ಎನ್ನುತ್ತಾನೆ, ಇದಕ್ಕೂ ಮುನ್ನ ರಥೋತ್ಸವದ ವೇಳೆ ಈ ಕಾರ್ಯ ನಡೆಯಬೇಕು ಮತ್ತು ಇದಕ್ಕೆ ಏನೇನು  ಮಾಡಬೇಕು ಯಾವ ರೀತಿ  ಇರಬೇಕು. ಪಲ್ಲಕ್ಕಿಯಲ್ಲಿ ಕೂತು ಮೆರವಣಿಗೆಯಾಗಬೇಕು ಎಂಬೆಲ್ಲಾ ವಿವರಗಳನ್ನು ಹೇಳುತ್ತಾನೆ. ಆಗಲಿ ಎಂದು ಹೇಳಿದಾಗ ಆಂಜನೇಯ ಮಾಯವಾಗುತ್ತಾನೆ. ಮುರುಡಪ್ಪ ಹಾಸಿಗೆಯಿಂದ ಎದ್ದು   ನೋಡಿದಾಗ ಅಲ್ಲಿ ಏನು  ಇರಲಿಲ್ಲ. ಇದು ಕನಸಾದರೂ ಆಂಜನೇಯನೆ ಈ  ರೀತಿ ನನ್ನೊಳಗೆ ಬಂದು ಹೇಳಿಸಿದ್ದಾನೆ ಎಂದು ಅರಿತು  ಈ  ಎಲ್ಲಾ ಘಟನೆಗಳನ್ನು ತಿಮ್ಮಣ್ಣ ಗೌಡ ಹಾಗೂ  ಮುಲ್ಲಂಗಿ ಭೀಮಾರೆಡ್ಡಿ ಅವರಿಗೆ ವಿವರಿಸುತ್ತಾರೆ, ಇದಕ್ಕೆ ಅವರು ರಥೋತ್ಸವದ ವೇಳೆ ಈ  ಪವಾಡ ನಡೆಯಲಿ ಎಂಬ ಸಮ್ಮತಿಯನ್ನು ನೀಡುತ್ತಾರೆ.

1909ರಲ್ಲಿ ಈ ಪವಾಡ ಮೊದಲ ಬಾರಿಗೆ ನಡೆಯಿತು.  ಆಂಜನೇಯ ರಥೋತ್ಸವದ  9 ದಿನದ ಪರ‍್ವದಲ್ಲಿ ದಾಸಪ್ಪ ಕಟ್ಟುನಿಟ್ಟಾದ ಬ್ರಹ್ಮಚರ್ಯ ಪಾಲಿಸುತ್ತ ಉಪವಾಸ ವ್ರತ ಕೈಗೊಳ್ಳಬೇಕು, ಉತ್ಸವದ ದಿನ  ಶ್ರೀ ಆಂಜನೇಯ ತೇರು ಹರಿದ ಮೇಲೆ ಮಧ್ಯಾಹ್ನದ ನಂತರ ಇಳಿ ಹೊತ್ತಿನಲ್ಲಿ ಮುರುಡಪ್ಪನನ್ನು ಆತನ ಮನೆಯಲ್ಲಿ ಅಲಂಕರಿಸಿ ತಲೆಗೆ 32 ಮೊಳ ರುಮಾಲು ಸುತ್ತಿ ಸೊಂಟಕ್ಕೆ ಕಟ್ಟಿ ಬಿಗಯಬೇಕು. ಕಾಲಿಗೆ ಗಗ್ಗರ ತೊಡಿಸಬೇಕು ಗೋವಿಂದನ ನಾಮ ಸ್ಮರಣೆ ಮಾಡುತ್ತಿದ್ದಂತೆ ಮಂಗಳ ವಾದ್ಯಗಳೊಂದಿಗೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕರೆತಂದು ಅಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಮೆರವಣಿಗೆಯ ಮೂಲಕ ಅಡವಿನ ಹನುಮಂತರಾಯ ದೇವಸ್ಥಾನ ಮತ್ತು ಭೂತನಾಥನಿಗೆ ವಂದಿಸಿ ಊರಿನ ಪೂರ್ವ ದಿಕ್ಕಿನಲ್ಲಿರುವ ದೊಡ್ಡಘಟ್ಟದ ಕೆರೆ ಬಳಿಯ ಉಗ್ರನರಸಿಂಹ ಸ್ವಾಮಿಯ ದೇವಸ್ಥಾನದ ವರೆಗೂ ಕಾಲ್ನಡಿಗೆಯಲ್ಲೇ ನಡೆದು ಹೋಗಿ ಸೂರ್ಯಾಸ್ತವಾಗುತ್ತಿದ್ದಂತೆ ಅಂದರೆ ಗೋಧೂಳಿ ಸಮಯದಲ್ಲಿ ಉಗ್ರನರಸಿಂಹ ಸ್ವಾಮಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಮತ್ತೆ ತುರುವನೂರಿಗೆ ಕಾಲ್ನಡಿಗೆಯಲ್ಲೇ ಹಿಂತಿರುಗುತ್ತಾನೆ.

ತುರುವನೂರಿನ ಅಡವಿ ದೇವಸ್ಥಾನದ ಬಳಿ ಇರುವ ಭೂತನಾಥನ ಆಶ್ರಯದಲ್ಲಿ ಸ್ಪಲ್ಪ ಕಾಲ ವಿರಮಿಸಿ ಸೂರ‍್ಯನು ಅಸ್ತಮಿಸಿದ ಮೂರು ಗಂಟೆಗಳ ಬಳಿಕ ಆ ಸ್ಥಳದಲ್ಲಿ ಗೋವಿಂದ ನಾಮಗಳಿಂದ ಹೊಗಳುತ್ತಿದ್ದಂತೆ ಪುನಃ ಪವಾಡ ನಡೆಯುತ್ತದೆ. ಶ್ರೀ ನರಸಿಂಹಸ್ವಾಮಿ ಹಾಗೂ ಆಂಜನೇಯನ ಪ್ರವೇಶದಿಂದ ದಾಸಪ್ಪ ಪವಾಡ ಪುರಷನಾಗುತ್ತಾನೆ ಹೀಗಾಗಿ ಮುಳ್ಳಪಲ್ಲಕ್ಕಿಯಲ್ಲಿ ಸೊಪ್ಪಿನ ಪತ್ರೆ ಹರಡಿ ಅದರ ಮೇಲೆ ಮುರುಡಪ್ಪನನ್ನು ಮಲಗಿಸಿ ಮೆರವಣಿಗೆ ಮೂಲಕ ಊರಿನ ಎಲ್ಲಾ ಭಾಗಗಳಲ್ಲಿ ಸಂಚರಿಸಬೇಕು. ಅಂದರೆ ಇದರಿಂದ ಎಲ್ಲ ದುಷ್ಟಶಕ್ತಿಗಳು ತೊಲಗಲಿ ಎಂದು ಆ ನಂತರ ಮೆರವಣಿಗೆ ಮುಗಿಯುತ್ತಿದ್ದಂತೆ ಮಧ್ಯರಾತ್ರಿ ದೇವಸ್ಥಾನದಲ್ಲಿ ತುಂಬಿಸಿಕೊಳ್ಳಬೇಕು. ಆಗ ಆಂಜನೇಯ ಮೂಲಸ್ವರೂಪದಲ್ಲಿ ಲೀನವಾಗುತ್ತಾನೆ. ಇದು ಆಂಜನೇಯ ಕನಸಿನಲ್ಲಿ ಮುರುಡಪ್ಪನಿಗೆ ಹೇಳಿದ ರೀತಿ ಪ್ರತಿವರ್ಷ ನಡೆದುಕೊಂಡು ಬರುತ್ತಿರುವ ಪವಾಡ ಇದು.

ಇನ್ನೂ ದೇವಸ್ಥಾನದಿಂದ ಮನೆಗೆ ತೆರಳಿದ ನಂತರ ಉಪವಾಸ ಕೈಬಿಡುತ್ತಾರೆ. ಮರುದಿನ ದೇವಸ್ಥಾನಕ್ಕೆ ಬಂದು ಪೂಜೆ ನೆರವೇರಿಸುತ್ತಾರೆ .ಇದಾದ ನಂತರ ರಥೋತ್ಸವದ ಎರಡನೇ ದಿನ ಓಕುಳಿ ದಿನ ಮಂಗಳವಾದ್ಯಗಳೊಂದಿಗೆ ಶ್ರೀ ಆಂಜನೇಯ ಸ್ವಾಮಿ ಹಾಗೂ ಶ್ರೀ ಕಲ್ಲೇಶ್ವರ ಸ್ವಾಮಿಯ ಎರಡೂ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿರಿಸಿಕೊಂಡು ಗಂಗಾಪೂಜೆಗೆ ಬಾವಿಗೆ ತೆರಳಿ ಪೂಜೆ ಮುಗಿಸಿಕೊಂಡು ಹಿಂತಿರುಗುವಾಗ ತುರುವಪ್ಪ ಬೇಟೆ ರಂಗಪ್ಪ ದೇವರಿಗೆ ಪೂಜೆಸಲ್ಲಿಸಿ ಅಲ್ಲಿಂದ ಕಲ್ಲೇಶ್ವರ ದೇವಸ್ಥಾನಕ್ಕೆ ಹೋಗಿ ಕಲ್ಲೇಶ್ವರ ಮೂರ್ತಿಯನ್ನು ಗುಡಿತುಂಬಿಸುತ್ತಾರೆ. ಹಾಗೆಯೇ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ತೆರಳಿ ಸ್ವಾಮಿ ಮರ‍್ತಿಯನ್ನು ಗುಡಿತುಂಬಿಸಲಾಗುತ್ತದೆ ಅಲ್ಲಿಗೆ ಆಂಜನೇಯ ಉತ್ಸವ ಮುಗಿಯುತ್ತದೆ.

ಮರುಡಪ್ಪ ಈ ಪವಾಡ ಮಾಡುವ ಮೂಲಕವೇ ಇಲ್ಲಿಯವರೆಗೂ ಮುರುಡಪ್ಪ ಪವಾಡ ಎಂತಲೇ ಹೆಸರು ಬಂದಿದೆ. ಈಗ ಅವರ ಮೂರನೆ ತಲೆಮಾರಿನ ವೆಂಕಟೇಶ್ ಅವರು   ಜಾತ್ರೆ 9 ದಿನ ಇರುವಾಗಲೇ ಉಪವಾಸ ಆರಂಭಿಸುತ್ತಾರೆ. ಹೀಗಾಗಿಯೇ ದೇವರ ಅವರ ಮೈಮೇಲೆ ಬರುತ್ತದೆ ಎನ್ನುವ  ನಂಬಿಕೆ ಇದೆ.

ಇಂತ ಪವಾಡ ನಡೆಯುವುದು ಈ ಬಾರಿ ಇದೇ ಪೆಬ್ರವರಿ 7 ರಂದು.  ಇದು ಕೇವಲ ತುರುವನೂರಿನಲ್ಲಿ ನಡೆಯುವ ಪವಾಡವಲ್ಲ ಇಂತಹ ಹಲವಾರು ದೈವತ್ವದ  ಪವಾಡಗಳು ಪರಂಪರಾನುಗತವಾಗಿ ಈ ದೇಶದ ಪ್ರತಿಯೊಂದು ಹಳ್ಳಿಯಲ್ಲೂ ನಡೆಸಿಕೊಂಡು ಬರುತ್ತಿದ್ದಾರೆ. ಅದನ್ನೇ ನಾವು ಜಾನಪದ ಸಂಸ್ಕೃತಿಯ ಪ್ರತೀಕ ಎಂದು ಹೇಳುತ್ತೇವೆ.

ಮಾಹಿತಿ  ಕೃಪೆ : ತುರುವನೂರು ಮಂಜುನಾಥ
ಮೊ : 99161 91222

ಶ್ರೀ ಆಂಜನೇಯ ಸ್ವಾಮಿ ಪಲ್ಲಕ್ಕಿ ದಾಸಪ್ಪ ಡಿ.ಆರ್. ವೆಂಕಟೇಶ್ ಅವರ ಮಾಹಿತಿ

01.06.1955 ರಲ್ಲಿ ವೆಂಕಟೇಶ್ ಅವರು ಜನಿಸಿದರು. ಇವರು ಕುಟುಂಬದಲ್ಲಿ ಒಟ್ಟು ಐವರ ಗಂಡು ಮಕ್ಕಳು ಮತ್ತು ನಾಲ್ವರು ಹೆಣ್ಣು ಮಕ್ಕಳು. ವೆಂಕಟೇಶ್ ಅವರು ಪ್ರೌಢಶಾಲೆವರರೆಗೂ ವಿದ್ಯಾಭ್ಯಾಸವನ್ನು ತುರುವನೂರಿನಲ್ಲಿಯೇ ಮುಗಿಸಿದರು.

ಅವರು ವೃತ್ತಿಜೀವನವನ್ನು ರಾಯಚೂರು ಜಿಲ್ಲೆಯ ಕೊಪ್ಪಳ ತಾಲೂಕಿನ ಮುನಿರಾಬಾದ್ ವಿದ್ಯುತ್ ಶಕ್ತಿ ಮಂಡಳಿಯಲ್ಲಿ ಕಾರ್ಯನಿರ್ವಾಹಕ ಎಂಜಿನಿಯರಾಗಿ ಆರಂಭಿಸಿದರು.
22/02/1976  ವೆಂಕಟೇಶ್ ಅವರು ಹಂಗಾಮಿಯಾಗಿ ಬೃಹತ್ ಕಾಮಗಾರಿ ವಿಭಾಗ ಉಗ್ರಾನದಲ್ಲಿ ಕೆಲಸಕ್ಕೆ ಸೇರಿದರು. ಅದಾದ ನಂತರ ಜುಲೈ 1976 ರಲ್ಲಿ ದಾವಣಗೆರೆಗೆ ವರ್ಗಾವಣೆಯಾದರೂ 01/07/ 1979 ರಂದು ಅವರು ಕೆಲಸಕ್ಕೆ ಕಾಯಂ ಮಾಡಲಾಯಿತು.

ಅವರನ್ನು ಮಾಪಕ ತಪಾಸಕ ಹುದ್ದೆಗೆ ಮುಂಬಡ್ತಿ ನೀಡಿ ದಾವಣಗೆರೆಯ ಮಾಪಕ ತಪಾಸನ ಶಾಖೆಗೆ ವರ್ಗಾಯಿಸಲಾಯಿತು. ಮುಂದೆ ಅವರು 1990 ರವರೆಗೂ ದಾವಣಗೆರೆಯಲ್ಲಿ ಮಾಪಕ ತಪಾಸಣಾ ಕಾರ್ಯ ನಿರ್ವಹಿಸಿದರು.

ವೆಂಕಟೇಶ್ ಅವರ ತಾತ 48 ವರ್ಷ, ತಂದೆ  1957 ರಿಂದ 1978 ರವರೆಗೂ 22 ವರ್ಷಗಳ ಕಾಲ ನಡೆಸಿಕೊಟ್ಟರು. 1979 ರಿಂದ ಸತತವಾಗಿ 44 ವರ್ಷಗಳಿಂದ ವೆಂಕಟೇಶ್ ಅವರು ದಾಸಪ್ಪನ ಪವಾಡವನ್ನು ನಡೆಸಿಕೊಂಡು ಬರುತ್ತಿದ್ದಾರೆ.

ವೆಂಕಟೇಶ್ ಅವರಿಗೆ ಪದ್ಮಾವತಿ ಅವರೊಂದಿಗೆ 22/021981 ರಲ್ಲಿ ವಿವಾಹವಾದರು.ಅವರಿಗೆ ಮೂವರು ಹೆಣ್ಣು ಮಕ್ಕಳು.

ಇಡೀ ಊರೇ ಮಧುವಣಗಿತ್ತಿಯಂತೆ ಸಿಂಗಾರ:

ರಥೋತ್ಸವ, ಜಾತ್ರೆಗಳು ಎಂದರೆ ಊರಿಗೆ ಊರೇ ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುವುದು ಸಾಮಾನ್ಯ. ಅದೇ ರೀತಿ ತುರುವನೂರು ಗ್ರಾಮವಷ್ಟೇ ಅಲ್ಲದೇ ಸುತ್ತಮುತ್ತಲ ಹಳ್ಳಿಗಳು ಕೂಡ ಜಾತ್ರೆಗೆ ಸಿಂಗಾರಗೊಳ್ಳುವುದು ಇಲ್ಲಿನ ವಿಶೇಷ. ಪ್ರತಿ ಮನೆಗಳು ಸುಣ್ಣ ಬಣ್ಣಗಳಿಂದ ಅಲಂಕೃತಗೊಂಡು, ಮನೆ ಮುಂದೆ ಚಿತ್ತಾರದ ರಂಗೋಲಿಗಳು ಗಮನಸೆಳೆಯುತ್ತವೆ. ತಳಿರು ತೋರಣ, ವಿವಿಧ ಹೂವುಗಳಿಂದ ಮನೆ ಬಾಗಿಲು ದೇವರ ಮನೆಯನ್ನು ಸಿಂಗಾರ ಮಾಡಲಾಗುತ್ತದೆ. ಉತ್ಸವದ ದಿನ ಬೇರೆಡೆ ನೆಲೆಸಿದ ಊರಿನ ಜನರ ಜೊತೆಗೆ ಸಂಬಂಧಿಕರು ಒಂದು ದಿನ ಮುಂಚಿತವಾಗಿಯೇ ತುರುವನೂರಿನ ತಮ್ಮ ನೆಂಟರ ಮನೆಗೆ ಬಂದು ಹಬ್ಬದ ವಾತಾವರಣರಕ್ಕೆ ಮೆರುಗು ನೀಡುತ್ತಾರೆ. ದೇವಸ್ಥಾನ ಕೂಡ ವಿದ್ಯುತ್ ದೀಪ, ಹೂವು, ತಳಿರು ತೋರಣಗಳಿಂದ ಸಿಂಗಾರ ಮಾಡಲಾಗಿರುತ್ತದೆ. ದೇವಸ್ಥಾನದ ಬೀದಿ ಸೇರಿ ಇಡೀ ಊರೇ ಆಕರ್ಷಕವಾಗಿ ಸಿಂಗಾರಗೊಂಡು ಜಾತ್ರೆ ಉತ್ಸವಕ್ಕೆ ಮೆರುಗು ತರಲಾಗುತ್ತದೆ.

ಉತ್ಸವ ಯಶಸ್ವಿಗೆ ಸಾವಿರಾರು ಕೈಗಳು :
ವರ್ಷಕ್ಕೊಮ್ಮೆ ನೆರವೇರುವ ರಥೋತ್ಸವ ಯಶಸ್ವಿಗೆ ಸಾವಿರಾರು ಭಕ್ತರು ವಿವಿಧ ಹಂತದಲ್ಲಿ ನೆರವಾಗುತ್ತಾರೆ. ಸಮಿತಿ ಸದಸ್ಯರು, ಗ್ರಾಮದ ಮುಖಂಡರು ಉತ್ಸವಕ್ಕೆ ಇಂತಹ ಕಾರ್ಯ ನಿಮ್ಮಿಂದ ಆಗಬೇಕು ಎಂದು ಯಾರ ಬಳಿಯೂ ಕೇಳುವುದಿಲ್ಲ. ಆದರೆ, ಸೇವೆ ನೀಡಲು ಭಕ್ತರು ಪೈಪೋಟಿಗೆ ಬೀಳುವುದು ಇಲ್ಲಿನ ವಿಶೇಷ. ವಿದ್ಯುತ್ ದ್ವೀಪಾಲಂಕರ, ಮೈಕ್, ಶಾಮಿಯಾನ, ದೇವಸ್ಥಾನಕ್ಕೆ ಬಣ್ಣ, ಹೂವಿನ ಅಲಂಕಾರ ಸೇರಿ ವಿವಿಧ ಸೇವೆ ಒದಗಿಸಿ ದೇವರ ಕೃಪೆಗಾಗಿ ಪಾತ್ರರಾಗಲು ಸಂಘ-ಸಂಸ್ಥೆಗಳು, ದಾನಿಗಳು ತನು, ಮನ ಧನ ಸಮರ್ಪಿಸಲು ಪೈಪೋಟಿಗೆ ಬೀಳುತ್ತಾರೆ. ಪವಾಡ, ಅನ್ನದಾನ, ಎಡೆ ಸೇವೆ, ತೇರು ಬಳಿಕ ದಾಸಯ್ಯನ ಪವಾಡ, ಸಂಜೆ ಓಕುಳಿ ಉತ್ಸವದಲ್ಲಿ ಎಲ್ಲ ಜಾತಿ ಜನರು ಒಗ್ಗೂಡಿ ಪಾಲ್ಗೊಳ್ಳುತ್ತಾರೆ. ಹೂವಿನ ಹರಾಜು ಕೂಡ ನಡೆಯುತ್ತದೆ. ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದರೂ ಜಾತ್ರೆ ಸಂದರ್ಭದಲ್ಲಿ ಭಕ್ತರು ಉತ್ಸವಕ್ಕೆ ಎಲ್ಲ ರೀತಿಯ ನೆರವು ನೀಡಿ, ದೇವರ ಕೃಪೆಗೆ ಪಾತ್ರರಾಗುವುದು ಇಲ್ಲಿನ ಜನರ ಹೃದಯವಂತಿಕೆಗೆ ಸಾಕ್ಷಿ ಆಗಿದೆ.

ಅಂಜನಾಸುತ ಕ್ಷೇಮಾಭಿವೃದ್ಧಿ ಸಂಘ :
ಈ ಹಿಂದೆ ಉತ್ಸವ ಸಂದರ್ಭದಲ್ಲಿ ಅಥವಾ ಪದ್ಧತಿಯಂತೆ ಹಿರಿಯರೆಲ್ಲರೂ ಸೇರಿ ಒಂದು ಸಮಿತಿ ಮಾಡಿ ಉತ್ಸವ ಆಚರಣೆ ಮಾಡಲಾಗುತ್ತಿತ್ತು. ಆದರೆ, ಪ್ರಸ್ತುತ ನಾಗರಿಕ ಸಮಾಜ ಆಧುನೀಕರಣಗೊಂಡಿದ್ದು, ಅದಕ್ಕೆ ತಕ್ಕಂತೆ ಭಕ್ತರೊಂದಿಗೆ ಸಂಪರ್ಕ ಪಡೆಯಲು ಹಾಗೂ ಅವರ ಭಕ್ತಿಗೆ ತಕ್ಕಂತೆ ನಡೆದುಕೊಳ್ಳಲು ಗ್ರಾಮಸ್ಥರ ತೀರ್ಮಾನದಂತೆ ಅಂಜನಾಸುತ ಕ್ಷೇಮಾಭಿವೃದ್ಧಿ ಸಂಘ ಸ್ಥಾಪಿಸಲಾಗಿದೆ. 9 ಜನರ ಸದಸ್ಯರನ್ನು ಒಳಗೊಂಡ ಈ ಸಂಘದಡಿ ಉತ್ಸವ ನಡೆಸುವುದು, ದೇಣಿಗೆ ಸಂಗ್ರಹ ಪಾರದರ್ಶಕವಾಗಿ ಜನರ ಮುಂದಿಡಲು ಸ್ಟೇಟ್ ಬ್ಯಾಂಕ್ ಇಂಡಿಯಾ ಬ್ಯಾಂಕ್ ಲ್ಲಿ ಖಾತೆ (ಖಾತೆ ಸಂಖ್ಯೆ: 41380101522. IFSC CODE :  SBIN0014126 ಈ ಖಾತೆಗೆ ದೇಣಿಗೆ ನೀಡಬಹುದು. ) ತೆರೆಯಲಾಗಿದೆ. ಭಕ್ತರು ನೇರವಾಗಿ ಬ್ಯಾಂಕ್ ಖಾತೆಗೆ ದೇಣಿಗೆ ನೀಡಬಹುದು ಅಥವಾ ದೇವಸ್ಥಾನದಲ್ಲಿ ರಸೀದಿ ಪಡೆದು ಸೇವಾಕರ್ತರಾಗಬಹುದು. ಹೊಸ ತೇರು ಕೂಡ ಈ ಸಂಘದ ನೇತೃತ್ವದಲ್ಲಿಯೇ ನಿರ್ಮಾಣ ಮಾಡಲಾಗಿದೆ. ಮಾಹಿತಿಗಾಗಿ ಮೊ.9620239732, 9743638255 ಈ ಮೊಬೈಲ್ ನಂಬರ್ ಗೆ ಸದಾ ಸಂಪರ್ಕಿಸಬಹುದಾಗಿದೆ.

ದೇವಸ್ಥಾನದಲ್ಲಿ ಕೆಲ ವಿಶೇಷ ಪೂಜೆಗಳು :
ವರ್ಷದ ಪ್ರಮುಖ ದಿನಗಳಲ್ಲಿ ದೇವಸ್ಥಾನದಲ್ಲಿ ವಿಶೇಷ ಆಚರಣೆಗಳು ನಡೆಯುತ್ತವೆ. ಪ್ರತಿ ಶನಿವಾರ ಎಲ್ಲಾ ಆಂಜನೇಯ ದೇವಸ್ಥಾನಗಳಂತೆ ಇಲ್ಲಿಯೂ ವಿಶೇಷ ಪೂಜೆ ನೆರವೇರುತ್ತದೆ.

ಶ್ರಾವಣಮಾಸದಲ್ಲಿ ಪ್ರತಿ ಶನಿವಾರ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಸಮರ್ಪಣೆ. ಹನುಮ ಜಯಂತಿ, ರಾಮನವಮಿ ಹಬ್ಬದಂದು ದೇವರಿಗೆ ವಿಶೇಷ ಅಲಂಕಾರ, ಪೂಜೆ ಸಲ್ಲಿಸಿ ಭಕ್ತರಿಗೆ ಪಾನಕ-ಕೋಸಂಬರಿ ವಿತರಿಸಲಾಗುತ್ತದೆ. ಯುಗಾದಿ ಹಬ್ಬದ ಚಂದ್ರದರ್ಶನ ಬಳಿಕ ಇಡೀ ಊರಿನ ಜನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸುವುದು ವಿಶೇಷ. ಜೊತೆಗೆ ಅಂದು ಕೃಷಿ ಚಟುವಟಿಕೆ ಯಾವ ದಿನ ಆರಂಭಿಸಬೇಕೆಂಬ ಸಂದೇಶವನ್ನು ನೀಡಲಾಗುತ್ತದೆ.

15 ವರ್ಷ ಬಳಿಕ ಅಖಂಡ ಭಜನೆ : 
ಆಂಜನೇಯ ದೇವಸ್ಥಾನದಲ್ಲಿ ಅನಾದಿ ಕಾಲದಿಂದಲೂ ಅಖಂಡ ಭಜನೆ ನಡೆದುಕೊಂಡು ಬರುತ್ತಿತ್ತು. ಆದರೆ, ವಿವಿಧ ಕಾರಣಕ್ಕೆ 15 ವರ್ಷ ಸ್ಥಗಿತಗೊಂಡಿದ್ದ ಅಖಂಡ ಭಜನೆ ಈ ಬಾರಿ ನಡೆಸುವ ಮೂಲಕ ಲೋಕಕಲ್ಯಾಣಕ್ಕೆ ಮುನ್ನುಡಿ ಬರೆಯಲಾಯಿತು. ಮಳೆ-ಬೆಳೆ ಚೆನ್ನಾಗಿ ಆಗಲಿ, ಜನರ ಬದುಕು ಸುಧಾರಣೆಗೆ ಪ್ರಾರ್ಥಿಸಿ 24 ಗಂಟೆಗಳ ಕಾಲ ನಿರಂತರ ಭಜನೆ ನಡೆಸಲಾಗುತ್ತದೆ. ಈ ಸಂದರ್ಭ ದೇವಸ್ಥಾನದ ಗೋಡೆಗಳಲ್ಲಿ ನೂರಾರು ದೇವರುಗಳ ಫೋಟೋಗಳನ್ನು ಕಟ್ಟಿ, ವಿವಿಧ ಪೂಜೆ ನೆರವೇರಿಸಲಾಗುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ಕೃಪೆ ಜೊತೆಗೆ ಭಜನೆ ಕಾರ್ಯಕ್ಕೆ ಕೈಜೋಡಿಸುತ್ತಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!