ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಫೆ.4) : ಮಧ್ಯ ಕರ್ನಾಟಕದ ಪ್ರಸಿದ್ಧ ಕ್ಷೇತ್ರ ನಾಯಕನಹಟ್ಟಿ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಪ್ರತಿ ವರ್ಷವು ಜಾತ್ರೆ ಆಯೋಜನೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳುವ ಬದಲಿಗೆ ಶಾಶ್ವತ ಯೋಜನೆಗಳನ್ನು ಅನುಷ್ಠಾನ ಮಾಡಲು ಸಂಕಲ್ಪ ಮಾಡಬೇಕು ಎಂದು ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ಅಧಿಕಾರಿಗಳಿಗೆ ಹೇಳಿದರು.
ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಗ್ರಾಮದ ಶ್ರೀಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನದ ಒಳಮಠದ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2023ನೇ ಸಾಲಿನ ದೊಡ್ಡ ರಥೋತ್ಸವದ ಜಾತ್ರಾ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ನಾಯಕನಹಟ್ಟಿ ಶ್ರೀಗುರುತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಯಾವುದೇ ರೀತಿಯ ಮೂಲಸೌಕರ್ಯಗಳ ಕೊರತೆಯಾಗದಂತೆ ಅಗತ್ಯ ಕ್ರಮವಹಿಸಬೇಕು ಎಂದರು.
ಶ್ರೀಗುರುತಿಪ್ಪೇರುದ್ರಸ್ವಾಮಿ ಮಹೋತ್ಸವವು ಮಾರ್ಚ್ 03 ರಿಂದ 13 ರವರೆಗೆ ನಡೆಯಲಿದ್ದು, ದೊಡ್ಡ ರಥೋತ್ಸವವು ಮಾರ್ಚ್ 10 ರಂದು ನಿಗಧಿಯಾಗಿದೆ. ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಮೂಲಸೌಲಭ್ಯಗಳ ಕೊರತೆ ಎದುರಾಗಬಾರದು. ಕುಡಿಯುವ ನೀರು, ರಸ್ತೆ, ಆರೋಗ್ಯ, ನೈರ್ಮಲ್ಯ ಸೇರಿದಂತೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆಯಿಂದ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಚಿಕ್ಕಕೆರೆ ಜಾಲಿ ತೆರವಿಗೆ ಸಂಕಲ್ಪ: ಜಾತ್ರೆಗೆ ಆಗಮಿಸುವ ಭಕ್ತಾದಿಗಳ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸುಮಾರು 600 ಎಕರೆ ವಿಸ್ತೀರ್ಣದ ಚಿಕ್ಕಕೆರೆಯಲ್ಲಿ ಬೆಳೆದ ಗಿಡಗಂಟಿ, ಜಾಲಿ ತೆರವಿಗೆ ಸಚಿವ ಶ್ರೀರಾಮುಲು ಸಂಕಲ್ಪ ಮಾಡಿದರು. ಒಂದು ತಿಂಗಳಲ್ಲಿ ಜಾಲಿ ತೆಗೆಸಬೇಕು. ಸ್ವತಃ ಎರಡು ದಿನಗಳ ಕಾಲ ಜಾಲಿ ತೆಗೆಯುವ ಕೆಲಸದಲ್ಲಿ ಶ್ರಮವಹಿಸುತ್ತೇನೆ. 10 ರಿಂದ 15 ಜೆಸಿಬಿಗಳನ್ನು ನಾನೇ ನೀಡುತ್ತೇನೆ ಹಾಗೂ ಸ್ವಚ್ಛವಾದ ಕೆರೆಯಲ್ಲಿ ಹೈಮಾಸ್ಟ್ ದೀಪ ಅಳವಡಿಸಲಾಗುವುದು ಎಂದು ಅವರು ಹೇಳಿದರು.
ಸಚಿವರ ಸಂಕಲ್ಪ ಮೆಚ್ಚಿದ ಗ್ರಾಮಸ್ಥ ರವಿಶಂಕರ್ ಇಂತಹ ಸತ್ಕಾರ್ಯಕ್ಕೆ ತಾವು ರೂ. 1 ಲಕ್ಷ ನೀಡುವುದಾಗಿ ಘೋಷಿಸಿದರು.