ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ: ಕವಿತೆ, ಸಾಹಿತ್ಯಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಸಾಹಿತ್ಯವನ್ನು ತುಚ್ಚವಾಗಿ ಕಾಣುವಂತಾಗಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್ ಬೇಸರ ವ್ಯಕ್ತಪಡಿಸಿದರು.
ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ, ಶರಣ ಸಾಹಿತ್ಯ ಪರಿಷತ್ತು ಇವರುಗಳ ಸಂಯುಕ್ತಾಶ್ರಯದಲ್ಲಿ ಮೊದಲ ವರ್ಷದ ಸಾಹಿತ್ಯ ಸಂಕ್ರಾಂತಿ ಸಂಭ್ರಮ ಹಾಗೂ ಕವಿಗೋಷ್ಠಿಯನ್ನು ಇತ್ತೀಚೆಗೆ ಪತ್ರಕರ್ತರ ಭವನದಲ್ಲಿ ಉದ್ಗಾಟಿಸಿ ಮಾತನಾಡಿದರು.
ಕವಿ, ಕವಿತ್ವ, ಕವಿತೆಯ ಸಾರ ಹಾಗೂ ಸಾಹಿತ್ಯವನ್ನು ಓದುವ ಬರೆಯುವ ಅಭ್ಯಾಸಿಸುವ ಯುವ ಜನಾಂಗ ತುಂಬಾ ವಿರಳ. ಹಿಂದಿನ ಸಾಹಿತ್ಯ ಹಾಗೂ ಚಲನಚಿತ್ರದ ಹಾಡುಗಳಲ್ಲಿ ಸಾರವಿರುತ್ತಿತ್ತು. ಕೇಳಲು ಕಿವಿಗೆ ಇಂಪಾಗಿತ್ತು.
ಪಿ.ಬಿ.ಶ್ರೀನಿವಾಸ್, ಎಸ್.ಪಿ.ಬಾಲಸುಬ್ರಮಣ್ಯಂ, ಎಸ್.ಜಾನಕಿ, ಚಿ.ಉದಯಶಂಕರ್ ಇವರ ಸಾಹಿತ್ಯ ಹಾಡುಗಳು ಮನಸ್ಸಿಗೆ ಮುದನೀಡುತ್ತಿದ್ದವು. ಕನ್ನಡ ಸಾಹಿತ್ಯ, ನಾಡು, ನುಡಿ, ಪ್ರೀತಿ-ಪ್ರೇಮ, ಪರಿಸರದ ಕುರಿತು ನಮ್ಮ ಹೆಸರಾಂತ ಕವಿಗಳು ಅನೇಕ ಕವಿತೆಗಳನ್ನು ರಚಿಸಿದ್ದಾರೆ. ಬೇಂದ್ರೆ, ಜಿ.ಎಸ್.ಎಸ್. ಅಶ್ವಥ್, ಬಿ.ಎಂ.ಶ್ರೀ. ಕೆ.ಎಸ್.ಎನ್. ಇನ್ನು ಅನೇಕ ಕವಿಗಳು ತಮ್ಮ ಕವಿತ್ವದ ಮೂಲಕ ಜೀವನದ ಅನುಭವ ಮತ್ತು ಬದುಕನ್ನು ಕಟ್ಟಿಕೊಡುವಂತ ಸಾಹಿತ್ಯ ರಚಿಸಿದ್ದಾರೆಂದು ಹೇಳಿದರು.
ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ತಿಪ್ಪೇಸ್ವಾಮಿ ಮಾತನಾಡಿ ಸಂಕ್ರಾಂತಿ ಮತ್ತು ಸಾಹಿತ್ಯಕ್ಕೆ ಇರುವ ಸಂಬಂಧ ನಿನ್ನೆ ಮೊನ್ನೆಯದಲ್ಲ. ಜಾನಪದ ಕಾಲದಿಂದಲೂ ಇದೆ. ಗ್ರಾಮೀಣ ಭಾಗದ ಜನಪದರು ಅನಕ್ಷರಸ್ಥರಾಗಿದ್ದರೂ ಸಹ ಅನೇಕ ಸಾಹಿತ್ಯವನ್ನು ರಸವತ್ತಾಗಿ ರಚಿಸಿದ್ದಾರೆ. ಸಂಕ್ರಾಂತಿಯನ್ನು ದೇಶದ ಹಲವು ರಾಜ್ಯಗಳಲ್ಲಿ ಭಿನ್ನ ಭಿನ್ನವಾಗಿ ಆಚರಿಸಲಾಗುವುದು. ಸೂರ್ಯನು ಧನುರಾಶಿಯಿಂದ ಮಕರರಾಶಿವರೆಗೆ ಪ್ರವೇಶಿಸುವುದರಿಂದ ಸಂಕ್ರಾಂತಿಯನ್ನು ಮಕರಸಂಕ್ರಮಣವೆಂದು ಕರೆಯಲಾಗುವುದು ಎಂದು ಹೇಳಿದರು.
ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕರಾದ ದಯಾ ಪುತ್ತೂರ್ಕರ್, ಚಾಂದಿನಿ ಖಾಲಿದ್ ಇವರುಗಳು ಮಾತನಾಡಿದರು.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ನೂತನ ಅಧ್ಯಕ್ಷೆ ಪುಷ್ಪವಲ್ಲಿ ಅಧ್ಯಕ್ಷತೆ ವಹಿಸಿದ್ದರು.
ರೇಣುಕಾ ಪ್ರಕಾಶ್, ಶೋಭ ಮಲ್ಲಿಕಾರ್ಜುನ್, ಮೀರಾ ನಾಡಿಗ್, ನಿರ್ಮಲ ಭಾರಧ್ವಜ್, ಕುಟೀಶ, ವಿನಾಯಕ, ಸತೀಶ್ ಕುಮಾರ್, ಪೂಜಾ ಅಜೇಯ್, ಪ್ರವೀಣ್ ಬೆಳಗೆರೆ, ಸತ್ಯಪ್ರಭ ವಸಂತಕುಮಾರ್, ಜಯಪ್ರಕಾಶ್, ಲೋಕೇಶ್ ಕಾಸವರಹಟ್ಟಿ, ಬೆಳಕು ಪ್ರಿಯ, ಮೆಹಬೂಬಿ, ಡಿ.ಬಿ.ನಾಯಕ್ ಇವರುಗಳು ಕವನ ವಾಚಿಸಿದರು.
ಸತೀಶ್‍ಕುಮಾರ್ ಪ್ರಾರ್ಥಿಸಿದರು. ಕುಟೀಶ ಸ್ವಾಗತಿಸಿದರು. ಪ್ರವೀಣ್ ಬೆಳಗೆರೆ ವಂದಿಸಿದರು. ಶೋಭ ಮಲ್ಲಿಕಾರ್ಜುನ್ ನಿರೂಪಿಸಿದರು.