ಮೈಸೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾದಾಗ ಅದನ್ನು ಕೆಡವಿ ಬಿಜೆಪಿ ಸರ್ಕಾರ ರಚನೆಯಾಗುವುದಕ್ಕೆ ಸಹಾಯ ಮಾಡಿದವರಲ್ಲಿ ಮೊದಲಿಗರು ಹೆಚ್ ವಿಶ್ವನಾಥ್. ಇದೀಗ ಮತ್ತೆ ಕಾಂಗ್ರೆಸ್ ಸೇರುವುದಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಾಗಲೇ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ವಾಪಾಸ್ ಆಗುವ ಚರ್ಚೆ ನಡೆಸಿದ್ದಾರೆ. ಇದೀಗ ನನ್ನ ರಕ್ತದ ಕಣಕಣದಲ್ಲೂ ಕಾಂಗ್ರೆಸ್ ಇದೆ ಎಂದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ಬಿಜೆಪಿ ಬಿಡುವುದಕ್ಕೆ ಸಿದ್ಧನಿದ್ದೇನೆ. ನಾನು ಹಿಡಿಯುವ ಧ್ವಜ ಕಾಲದ ಅನುಸಾರ ಬದಲಾಗಿರಬಹುದು. ಆದರೆ ನನ್ನ ತತ್ವಗಳು ಬದಲಾಗಿಲ್ಲ. ಬಿಜೆಪಿಯಿಂದ ಹಣ ಪಡೆದು ಸೇರಿದ್ದರೆ, ಈಗ ಅದರ ತಪ್ಪುಗಳನ್ನು ಹೇಳುವುದಕ್ಕೆ ಧೈರ್ಯ ಬರ್ತಾ ಇತ್ತಾ..? ಎಂದು ಪ್ರಶ್ನಿಸಿದ್ದಾರೆ.
ಐ ಯಾಮ್ ಎ ಕ್ಲೀನ್ ಮ್ಯಾನ್. ಇಷ್ಟು ವರ್ಷ ರಾಜಕೀಯದಲ್ಲಿದ್ದರು ಕೂಡ ಇಂದು ಚಿಕ್ಕ ಮನೆಯಲ್ಲಿಯೇ ಇದ್ದೇನೆ. ಅಪ್ಪನ ಜಮೀನಿನಲ್ಲಿಯೇ ದುಡಿದು ಮಕ್ಕಳನ್ನು ಸಾಕಿದ್ದೇನೆ. ಬಿಜೆಪಿ ಸರ್ಕಾರ ಬರೀ ಉಳ್ಳವರ ಪರ ಇದೆ. ಬರೀ ಸುಳ್ಳು ಹೇಳಿಕೊಂಡು ಓಡಾಡುತ್ತಿದೆ. ಭದ್ರಾವತಿಯಲ್ಲಿ ಉಕ್ಕು ಮತ್ತು ಕಬ್ಬಿಣದ ಕಾರ್ಖಾನೆ ಲಾಭದಲ್ಲಿದ್ದರು ಸರ್ಕಾರ ಮುಚ್ಚುವುದಕ್ಕೆ ಹೊರಟಿದೆ. ಆದರೂ ಮಾಜಿ ಸಿಎಂ ಯಡಿಯೂರಪ್ಪ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.