ಬೆಂಗಳೂರು: 2023ರ ಚುನಾವಣೆಯ ಬಿಸಿ ಜೋರಾಗಿದೆ. ಪ್ರಚಾರದ ಜೊತೆಗೆ ಕ್ಷೇತ್ರ ಫಿಕ್ಸ್ ಮಾಡಿಕೊಳ್ಳುವಲ್ಲೂ ಅಭ್ಯರ್ಥಿಗಳು ತಲೆ ಕೆಡಿಸಿಕೊಂಡಿದ್ದಾರೆ. ಯಾವ ಕ್ಷೇತ್ರದಲ್ಲಿ ನಿಂತರೆ ಯಾರು ಎದುರಾಳಿಯಾಗುತ್ತಾರೆ..? ಅಲ್ಲಿನ ಗೆಲುವು ಪಡೆಯುವುದು ಹೇಗೆ ಎಂಬುದೆಲ್ಲವನ್ನು ಲೆಕ್ಕಾಚಾರ ಹಾಕುತ್ತಿದ್ದಾರೆ. ಇದೀಗ ಶ್ರೀರಾಮುಲು ಮತ್ತು ಸಂತೋಷ್ ಲಾಡ್ ಭೇಟಿ ಕಾಂಗ್ರೆಸ್ ನಾಯಕರನ್ನು ಮಾತ್ರವಲ್ಲ ಬಿಜೆಪಿ ನಾಯಕರಿಗೂ ತಲೆ ಬಿಸಿ ಮಾಡಿದೆ.
ಬಳ್ಳಾರಿ ರಾಜಕೀಯ ಈ ಬಾರಿ ಬಹಳಷ್ಟು ಸುದ್ದಿಯಾಗುತ್ತಿದೆ. ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅತ್ಯಾಪ್ತರು ಎಂಬುದು ಗೊತ್ತಿದೆ. ಸ್ನೇಹಿತರ ನಡುವೆ, ಅಣ್ಣ ತಮ್ಮಂದಿರ ನಡುವೆ ಚುನಾವಣಾ ಸ್ಪರ್ಧೆ ಏರ್ಪಡಲಿದೆ. ಸೋಮಶೇಖರ್ ರೆಡ್ಡಿ ಬಳ್ಳಾರಿ ಮೇಲೆ ಕಣ್ಣಿಟ್ಟಿದ್ದರೆ, ಶ್ರೀರಾಮುಲು ಸಂಡೂರಿನ ಮೇಲೆ ಕಣ್ಣಿಟ್ಟಿದ್ದಾರೆ.
ಕಾಂಗ್ರೆಸ್ ಅಧಿಪತ್ಯ ಸಾಧಿಸಿರುವಂತ ಸಂಡೂರಿನ ಮೇಲೆ ಶ್ರೀರಾಮುಲು ಕಣ್ಣಾಕಿದ್ದಾರೆ. ಸಂಡೂರಿನಲ್ಲಿ ನಿಲ್ಲುವುದಕ್ಕೆ ಸಂತೋಷ್ ಲಾಡ್ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಸಂತೋಷ್ ಲಾಡ್ ಹಾಗೂ ಶ್ರೀರಾಮುಲು ಭೇಟಿ ಬಿಜೆಪಿಗೆ ಗೊಂದಲವನ್ನುಂಟು ಮಾಡಿದೆ.