ಗುಬ್ಬಿ : ತಾಲ್ಲೂಕಿನ ಕಸಬಾ ಹೋಬಳಿಯ ಎಸ್. ಕೊಡಗೀಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಯ ಪ್ರಕ್ರಿಯೆಯನ್ನು ಚುನಾವಣಾ ಅಧಿಕಾರಿಯಾಗಿ ವೆಂಕಟರಂಗನ್ ನಡೆಸಿದರು.
ಈ ಹಿಂದೆ ಇದ್ದ ಅಧ್ಯಕ್ಷೆ ಸ್ಥಾನಕ್ಕೆ ಗಂಗನರಸಮ್ಮ ರಾಜೀನಾಮೆ ನೀಡಿ ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಂಜಮ್ಮ 19 ಜನ ಸದಸ್ಯರ ಪೈಕಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಸರ್ವ ಸದಸ್ಯರ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷೆ ಮಂಜಮ್ಮ ಮಾತನಾಡಿ ನಾನು ಸರ್ವ ಸದಸ್ಯರ ಒಪ್ಪಿಗೆ ಪಡೆದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಚರಂಡಿ, ರಸ್ತೆ, ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತೇನೆ ಹಾಗೂ ಮೂಲಭೂತ ಸೌಕರ್ಯಗಳು ಮತ್ತು ಸ್ವಚ್ಛತೆಯ ಕಡೆಗೆ ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಸದಸ್ಯೆ ಧನಲಕ್ಷ್ಮಿ ಆರ್ ಮಾತನಾಡಿ ವಿರೋಧವಾಗಿ ಆಯ್ಕೆಯಾದ ಅಧ್ಯಕ್ಷರ ಜೊತೆಗೂಡಿ ಸರ್ಕಾರದಿಂದ ಬರುವಂತಹ ಸೌಲಭ್ಯಗಳನ್ನು ಬಳಸಿಕೊಂಡು ನಮ್ಮ ಗ್ರಾಮ ಪಂಚಾಯಿತಿಯನ್ನು ಅಭಿವೃದ್ಧಿಪಡಿಸಿ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ಶ್ರಮಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಂಬುಜಮ್ಮ , ಪಿಡಿಒ ಶಶಿಧರ್ ಮತ್ತು ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು, ಮುಖಂಡರುಗಳಾದ ದಿವಾಕರ್, ಕೆಜಿ ಗಿರೀಶ್, ಪಾಂಡುರಂಗಯ್ಯ, ವೆಂಕಟೇಶ್, ಶ್ರೀನಿವಾಸ್, ಗೋಪಾಲ್, ಮಹದೇವ್, ಬಿಲ್ ಕಲೆಕ್ಟರ್ ಗಿರೀಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.