ಕೊಪ್ಪಳ: ಈ ಬಾರಿಯ ಚುನಾವಣಾ ಕಣ ರಂಗೇರಿದೆ. ಕರ್ನಾಟಕದ ರಾಜ್ಯದ ನೆಲ ಚುನಾವಣಾ ಬಿಸಿಯಿಂದ ಸುಡುತ್ತಿದೆ. ಮೂರು ಪಕ್ಷಗಳ ಪ್ರಚಾರ ಕಾರ್ಯ ಜೋರಾಗಿದೆ. ಅದರ ಜೊತೆಗೆ ಇದೀಗ ಜನಾರ್ದನ ರೆಡ್ಡಿ ಪಕ್ಷವೂ ಸದ್ದು ಮಾಡುತ್ತಿದೆ.
ಬಿಜೆಪಿಯಿಂದ ಟಿಕೆಟ್ ಬಯಸಿದ್ದಂತ ರೆಡ್ಡಿಗೆ ಟಿಕೆಟ್ ಸಿಗದ ಬೇಸರ ಮತ್ತೊಂದು ಪಕ್ಷವನ್ನೇ ಕಟ್ಟುವಂತೆ ಮಾಡಿದೆ. ಜನಾರ್ದನ ರೆಡ್ಡಿ ಪಕ್ಷಕ್ಕೆ ಬಿಜೆಪಿ ನಾಯಕರು ಬರುತ್ತಿದ್ದಾರೆ. ಇದರ ನಡುವೆ ಪಕ್ಷ ಕಟ್ಟುವುದು ಬೇಡ ಎಂದೇ ಸಹೋದರ ಸೋಮಶೇಕರ್ ರೆಡ್ಡಿ ಹಾಗೂ ಸ್ನೇಹಿತ ಶ್ರೀರಾಮುಲು ತಿಳಿಸಿದ್ದರು. ಆದರೂ ಯಾರ ಮಾತನ್ನು ಕೇಳದೆ ಪಕ್ಷ ಸ್ಥಾಪನೆ ಮಾಡಿದ್ದಾರೆ ಜನಾರ್ದನ ರೆಡ್ಡಿ ಅವರು. ಜೊತೆಗೆ ಚುನಾವಣಾ ಪ್ರಚಾರದಲ್ಲೂ ಫುಲ್ ಬ್ಯುಸಿಯಾಗಿದ್ದಾರೆ.
ಇದೀಗ ಸಹೋದರ ಸೋಮಶೇಖರ್ ರೆಡ್ಡಿ ವಿರುದ್ಧವೇ ತಮ್ಮ ಹೆಂಡತಿಯನ್ನು ಕಣಕ್ಕೆ ಇಳಿಸಿದ್ದಾರೆ. ಇಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ವತಿಯಿಂದ ಗಂಗಾವತಿ ತಾಲೂಕಿನ ಆನೆಗುಂದಿಯಲ್ಲಿ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಬಳ್ಳಾರಿ ವಿಧಾನಸಭಾ ಕ್ಷೇತ್ರದಿಂದ ನನ್ನ ಪತ್ನಿ ಅರುಣಾ ಲಕ್ಷ್ಮೀಯನ್ನು ಕಣಕ್ಕೆ ಇಳಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಈ ಮೊದಲು ಸಹೋದರ ಎದುರು ಜನಾರ್ದನ ರೆಡ್ಡಿ ಅವರೇ ಸ್ಪರ್ಧೆಗೆ ಇಳಿಯುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ತಮ್ಮ ಹೆಂಡತಿಯನ್ನು ಸ್ಪರ್ಧೆಗೆ ಬಿಟ್ಟಿದ್ದಾರೆ.