ವಿಜಯಪುರ: ಉತ್ತರ ಕರ್ನಾಟಕ ಮಂದಿಯ ಕನಸು ಈಗ ನೆರವೇರುತ್ತಿದೆ. ಬಹಳ ವರ್ಷಗಳಿಂದ ವಿಮಾನ ನಿಲ್ದಾಣವಾಗಬೇಕೆಂಬುದೇ ಕನಸಾಗಿತ್ತು. ಇದೀಗ ವಿಮಾನ ನಿಲ್ದಾಣ ಒಂದು ಹಂತಕ್ಕೆ ಬಂದು ನಿಂತಿದ್ದು, ಇನ್ನು ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ.
ವಿಮಾನ ನಿಲ್ದಾಣಕ್ಕೆ ಈಗಾಗಲೇ ಬಸವಣ್ಣ ಅವರ ಹೆಸರು ಇಡಬೇಕೆಂಬ ಅನುಮೋದನೆಯಾಗಿದೆ. ಈಗ ಸ್ಥಳೀಯರ ಬೇಡಿಕೆ ಬೇರೆಯಾಗಿದೆ. ಇತ್ತಿಚೆಗಷ್ಟೇ ಲಿಂಗೈಕ್ಯರಾದ ನಡೆದಾಡುವ ದೇವರು ಎಂದೇ ಖ್ಯಾತನಾಮರಾದ ಸಿದ್ದೇಶ್ವರ ಶ್ರೀಗಳ ಹೆಸರನ್ನು ಇಡುವಂತೆ ಮನವಿ ಮಾಡುತ್ತಿದ್ದಾರೆ. ಆದರೆ ಈಗಾಗಲೇ ಅನುಮೋದನೆಯಾಗಿರುವ ಕಾರಣ ಬಸವಣ್ಣ ಅವರ ಹೆಸರೇ ಅಂತಿಮ ಎಂದು ಸಚಿವ ಗೋವಿಂದ ಕಾರಜೋಳ ಅವರು ಸ್ಪಷ್ಟನೆ ನೀಡಿದ್ದಾರೆ.
ವಿಜಯಪುರದ ಹೊರಭಾಗದ ಬುರಣಾಪುರ ಹಾಗೂ ಮದಬಾವಿಯಲ್ಲಿ ತಯಾರಾಗಿರುವ ವಿಮಾನ ನಿಲ್ದಾಣ ಪ್ರಧಾನಿ ಮೋದಿಯವರಿಂದ ಉದ್ಘಾಟನೆಯಾಗಲಿದೆ. ಈ ಬಗ್ಗೆ ಮಾತನಾಡಿರುವ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು, ಈಗಾಗಲೇ ವಿಮಾನ ನಿಲ್ದಾಣ ಶೇಕಡ 75ರಷ್ಟು ಪೂರ್ಣವಾಗಿದೆ. ಫೆಬ್ರವರಿ 15ರ ಒಳಗೆ ಸಂಪೂರ್ಣ ಮಾಡಲು ತಿಳಿಸಲಾಗಿದ್ದು, ಶಿವಮೊಗ್ಗ ಮತ್ತು ವಿಜಯಪುರ ವಿಮಾನ ನಿಲ್ದಾಣ ಎರಡು ಒಂದೇ ದಿನ ಲೋಕಾರ್ಪಣೆಯಾಗಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.