ಬೆಂಗಳೂರು: ಇಂದು ಮಹದೇವ ವಿಧಾನಸಭಾ ಕ್ಷೇತ್ರದಲ್ಲಿ ಮಂಜುನಾಥ ಸ್ವಾಮಿಯ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಕಾಗಿನೆಲೆ ಈಶ್ವರಾನಂದ ಸ್ವಾಮೀಜಿ ಆಗಮಿಸಿದ್ದರು. ಇಬ್ಬರು ವೇದಿಕೆಯನ್ನು ಹಂಚಿಕೊಂಡಿದ್ದರು. ಆಗಲೇ ಇಬ್ಬರ ನಡುವೆ ಮೈಕ್ ಗುದ್ದಾಟ ನಡೆದಿದೆ.
ವೇದಿಕೆ ಮೇಲೆ ಮಾತನಾಡುತ್ತಾ, ಈಶ್ವರಾನಂದ ಸ್ವಾಮೀಜಿ ಅವರು, ಸಿಎಂ ಬೊಮ್ಮಾಯಿ ಅವರು ಕೇವಲ ಆಶ್ವಾಸನೆ ಕೊಡುವ ಮುಖ್ಯಮಂತ್ರಿಗಳಾಗಬಾರದು. ಬೆಂಗಳೂರು ಪ್ತವಾಹ ಬಂದು ಏನೆಲ್ಲಾ ಆಗಿದೆ ಎಂಬುದು ತಿಳಿದಿದೆ. ಆದರೆ ಇದು ಅಧಿಕಾರಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವರಿಕೆಯಾಗುತ್ತಿಲ್ಲ ಎಂದು ಸ್ವಾಮೀಜಿಗಳು ಮುಖ್ಯಮಂತ್ರಿಗಳ ವಿರುದ್ಧ ಮಾತನಾಡುತ್ತಿದ್ದರು.
ಇದಕ್ಕೆ ಸಿಡಿಮಿಡಿಗೊಂಡ ಸಿಎಂ ಬೊಮ್ಮಾಯಿ ಅವರು, ಸ್ವಾಮೀಜಿಗಳು ಮಾತನಾಡುತ್ತಿರುವಾಗಲೇ ಮೈಕ್ ಕಸಿದುಕೊಂಡಿದ್ದಾರೆ. ಜೊತೆಗೆ ಸ್ವಾಮೀಜಿ ಮಾಡಿದ ಆಪಾದನೆಗೆ ಸ್ಪಷ್ಟನೆ ನೀಡಿದ್ದಾರೆ. ಒತ್ತುವರಿ ತೆರವು ಮಾಡುವ ಮೂಲಕ ಆದಷ್ಡು ಬೇಗ ರಾಜಕಾಲುವೆ ಕೆಲಸವನ್ನು ಮಾಡುತ್ತೇನೆ. ಆ ಕೆಲಸ ಈಗಾಗಲೇ ಆರಂಭವಾಗಿದೆ. ಸರ್ಕಾರದಿಂದ ಕೂಡ ಅದಕ್ಕೆ ಬೇಕಾದ ಅನುದಾನ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.