ಸುದ್ದಿಒನ್, ಚಿತ್ರದುರ್ಗ, (ಅ.05) : ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದರು.
ಹಿರಿಯೂರು ತಾಲ್ಲೂಕಿನ ಗುಯಿಲಾಳ್ ಟೋಲ್ ಬಳಿ ಕಾರ್ಯಕರ್ತರನ್ನು ಭೇಟಿ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕರೋನಾ ವೇಳೆ ಬಿಜೆಪಿ ಸರ್ಕಾರ ನಡೆದು ಕೊಂಡ ರೀತಿಗೆ ಜನತೆ ಬೇಸತ್ತಿದ್ದಾರೆ. ಸರ್ಕಾರದ ಈ ವೈಪಲ್ಯತೆಗಳಿಂದ ರಾಜ್ಯದ ಜನರು ಬದಲಾವಣೆ ಬಯಸಿದ್ದಾರೆ. ಜನರು ಯಾಕೆ ಬಿಜೆಪಿ ಪಕ್ಷಕ್ಕೆ ಮತ ನೀಡಬೇಕು ಎಂಬ ಯಕ್ಷ ಪ್ರಶ್ನೆಯಾಗಿದೆ. ಅದಕ್ಕಾಗಿ ಜನರು ಕಾಂಗ್ರೆಸ್ ಪಕ್ಷಕ್ಕೆ ಆಶಿರ್ವಾದ ಮಾಡಲಿದ್ದು, ಎರಡು ಕ್ಷೇತ್ರಗಳಲ್ಲಿ ನಾವು ಜಯಗಳಿಸಲಿದ್ದೇವೆ ಎಂದು ತಿಳಿಸಿದರು.
ಕಳೆದ ಎರಡು ವರ್ಷಗಳಿಂದ ಸರ್ಕಾರ ವಿಫಲವಾಗಿದೆ. ಇದೊಂದು ನಿರ್ಜೀವ ಸರ್ಕಾರವಾಗಿದೆ. ಯಾವ ಪುರುಷಾರ್ಥಕ್ಕೆ ಜನರು ಮತ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತದಿಂದ ಜನರು ಭ್ರಮನಿರಸವಾಗಿದ್ದಾರೆ. ಕರೋನಾ ಸಂದರ್ಭದಲ್ಲಿ ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್ ಇತರೆ ವಸ್ತುಗಳ ಖರೀದಿಯಲ್ಲಿ ೨ ಸಾವಿರ ಕೋಟಿ ಹಗರಣ ಮಾಡಿದ್ದಾರೆಂದು ಕಾಂಗ್ರೆಸ್ ಆರೋಪ ಮಾಡಿತ್ತು. ಖರೀದಿ ಬಗ್ಗೆ ಲೆಕ್ಕ ಕೊಡಿ ಅಂತ ಕಾಂಗ್ರೆಸ್ ಪಕ್ಷ ಕೇಳಿತ್ತು. ಆದರೆ ಇದುವರೆಗೂ ಸರ್ಕಾರ ಲೆಕ್ಕ ಕೊಟ್ಟಿಲ್ಲ, ಇದಕ್ಕೆ ಜನರು ಮತ ನೀಡಬೇಕಾ ಎಂದು ಪ್ರಶ್ನಿಸಿದರು.