ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಜ.23): ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ, ಕಾರ್ಯಾಧ್ಯಕ್ಷ ಮಂಜುನಾಥ್ ಇವರುಗಳು ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ವಿರುದ್ದ ಲಂಚ ಆರೋಪ ಮಾಡಿರುವುದನ್ನು ನ್ಯಾಯಾಧೀಶರಿಂದ ಅಥವಾ ಲೋಕಾಯುಕ್ತರಿಂದ ತನಿಖೆ ನಡೆಸುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್‍ನಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರು ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ನಳೀನ್‍ಕುಮಾರ್ ಕಟೀಲ್‍ಗೆ ಮನವಿ ಸಲ್ಲಿಸಲಾಯಿತು.
ಗಾಂಧಿವೃತ್ತದಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿರವರ ವಿರುದ್ದ ಧಿಕ್ಕಾರಗಳನ್ನು ಕೂಗುತ್ತ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಆಗ್ರಹಿಸಿದರು.
ಜಿಲ್ಲಾ ಆಸ್ಪತ್ರೆಗೆ ಔಷಧಿ ಸರಬರಾಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಕಟ್ಟಡಗಳ ನಿರ್ಮಾಣದಲ್ಲಿ ಗುತ್ತಿಗೆದಾರರಿಂದ ಶೇ.40 ರಷ್ಟು ಕಮೀಷನ್ ಪಡೆದಿರುವುದು ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರಸ್ತೆ ಅಗಲೀಕರಣದಲ್ಲಿಯೂ ತಾರತಮ್ಯ, ಆಶ್ರಯ ಯೋಜನೆಯಡಿ 124 ಬಡ ಕುಟುಂಬಗಳಿಗೆ ಮನೆಗಳನ್ನು ನೀಡುವಲ್ಲಿಯೂ ಎರಡೆರಡು ಲಕ್ಷ ರೂ.ಗಳನ್ನು ಪಡೆದು ಕೇವಲ ಹಕ್ಕುಪತ್ರಗಳನ್ನು ನೀಡಲಾಗಿದೆಯೇ ವಿನಃ ಮನೆಗಳಲ್ಲಿ ಬೇರೆ ಪ್ರಭಾವಿಗಳು ವಾಸಿಸುತ್ತಿದ್ದಾರೆಂದು ಹಣ ಕಳೆದುಕೊಂಡಿರುವವರು ಮಾಧ್ಯಮಗಳಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಇವೆಲ್ಲವನ್ನು ತನಿಖೆಗೊಳಪಡಿಸಬೇಕು ಎಂದು ಪ್ರತಿಭಟನಾಕಾರರು ಸರ್ಕಾರದ ಗಮನ ಸೆಳೆದರು.
ನಗರದಲ್ಲಿ ಅವಶ್ಯಕತೆಯಿಲ್ಲದ ಕಡೆ ಡಿವೈಡರ್‍ಗಳ ನಿರ್ಮಾಣ, ಹೊಸದಾಗಿ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಆರು ಲಕ್ಷ ರೂ.ಲಂಚ, ಎಸ್ಸಿ.ಎಸ್ಟಿ.ಗೆ ಕಾರ್ ಲೋನ್‍ಗೆ ಎರಡು ಲಕ್ಷ ರೂ. ಗಂಗಾಕಲ್ಯಾಣದಡಿ ಬೋರ್ ಕೊರೆಸಲು ಮೂವತ್ತು ಸಾವಿರ, ವಾಟರ್ ಫಿಲ್ಟರ್‍ಗಳಿಗೆ ಹತ್ತು ಸಾವಿರ ರೂ. ಈ ರೀತಿ ಯಾವುದರಲ್ಲಿಯೂ ಕಮಿಷನ್ ಪಡೆಯುವುದನ್ನು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಬಿಟ್ಟಿಲ್ಲ. ಅಧಿಕಾರಿಗಳು ಹಾಗೂ ಇಂಜಿನಿಯರ್‍ಗಳನ್ನು ಹೆದರಿಸಿ ನಿಮಯಗಳನ್ನು ಉಲ್ಲಂಘನೆ ಮಾಡುವಂತೆ ನೋಡಿಕೊಳ್ಳುವುದು ಇವರಿಗೆ ಕರಗತವಾಗಿದೆ. ಹಾಗಾಗಿ ಎಲ್ಲಾ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್‍ಪೀರ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಉಪಾಧ್ಯಕ್ಷರುಗಳಾದ ನಜ್ಮತಾಜ್, ಡಿ.ಟಿ.ವೆಂಕಟೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಬಿ.ಟಿ.ಜಗದೀಶ್, ನಾಗರಾಜ್ ಜಾನ್ಹವಿ, ಕೆ.ಪಿ.ಸಿ.ಸಿ. ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ವಿಧಾನಪರಿಷತ್ ಮಾಜಿ ಸದಸ್ಯ ರಘು ಆಚಾರ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿರಾ ಎ.ಮಕಾಂದಾರ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತ ನಂದಿನಿಗೌಡ, ನಗರಾಧ್ಯಕ್ಷ ಯು.ಲಕ್ಷ್ಮಿಕಾಂತ್, ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಜಯಣ್ಣ ಮೊಗಲಹಳ್ಳಿ, ಪರಿಶಿಷ್ಠ ಪಂಗಡ ವಿಭಾಗದ ಜಿಲ್ಲಾಧ್ಯಕ್ಷ ಹೆಚ್.ಅಂಜಿನಪ್ಪ, ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಅಬ್ದುಲ್ಲಾ, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್, ನ್ಯಾಯವಾದಿ ಬಾಲಕೃಷ್ಣಸ್ವಾಮಿ, ಅಸಂಘಟಿತ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಮೋಹನ್ ಪೂಜಾರಿ, ಚೋಟು, ಇಂಟೆಕ್ ಜಿಲ್ಲಾಧ್ಯಕ್ಷ ಅಶೋಕ್ ನಾಯ್ಡು, ಸೈಯದ್ ಖುದ್ದೂಸ್, ಪದವೀಧರ ವಿಭಾಗದ ಜಿಲ್ಲಾಧ್ಯಕ್ಷ ಮುದಸಿರ್ ನವಾಜ್, ಸೇವಾದಳದ ಇಂದಿರ, ಡಿ.ಕುಮಾರ್ ಪಿಳ್ಳೆಕೆರನಹಳ್ಳಿ, ಪ್ರಕಾಶ್‍ನಾಯ್ಕ, ಇಮಾಮ್ ಮೊಳಕಾಲ್ಮುರು ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.