ವಿಜಯಪುರ: ಜೆಡಿಎಸ್ ಪಕ್ಷ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿತ್ತು. ಸಿಂದಗಿ ಕ್ಷೇತ್ರದಲ್ಲಿ ಶಿವಾನಂದ ಪಾಟೀಲ್ ಅವರೇ ಸ್ಪರ್ಧೆ ನಡೆಸಬೇಕಿತ್ತು. ಆದರೆ ವಿಧಿಯಾಟ, ಚುನಾವಣೆಗೂ ಮುನ್ನವೇ ಅವರನ್ನು ತನ್ನತ್ತ ಕರೆದುಕೊಂಡು ಬಿಟ್ಟಿದೆ. ಶಿವಾನಂದ ಪಾಟೀಲ್ ಅವರ ಸಾವಿನಿಂದ ಕುಟುಂಬಸ್ಥರು ಮತ್ತು ಜೆಡಿಎಸ್ ಪಕ್ಷ ದುಃಖದಲ್ಲಿದೆ.
ಜೆಡಿಎಸ್ ಅಭ್ಯರ್ಥಿಯ ಅಕಾಲಿಕ ನಿಧನದಿಂದ ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ. ಸೋಮಜಾಳ ಗ್ರಾಮಕ್ಕೆ ಭೇಟಿ ನೀಡಿ, ಶಿವಾನಂದ ಪಾಟೀಲ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ. ಪಾಟೀಲ್ ಅವರ ಪತ್ನಿ, ಪಮಗಳು, ಮಗನಿಗೆ ಧೈರ್ಯ ತುಂಬಿದ್ದಾರೆ. ನಿಮ್ಮ ಜೊತೆಗೆ ಜೆಡಿಎಸ್ ಯಾವಾಗಲೂ ಇರುತ್ತೆ ಎಂದು ಭರವಸೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಅಕಾಲಿಕ ಮರಣಕ್ಕೆ ತುತ್ತಾಗಿ ಅಗಲಿದ ಸಿಂದಗಿ ವಿಧಾನಸಭೆ ಕ್ಷೇತ್ರದ @JanataDal_S ಪಕ್ಷದ ಅಭ್ಯರ್ಥಿ, ಸಹೃದಯಿ, ಸ್ನೇಹಜೀವಿ ಶ್ರೀ ಶಿವಾನಂದ ಪಾಟೀಲ್ ಆವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದೆ. ಅವರ ನಿಧನ ನಮ್ಮ ಪಕ್ಷಕ್ಕೆ ಆದ ಬಹುದೊಡ್ಡ ನಷ್ಟ. ವೈಯಕ್ತಿಕವಾಗಿ ನನಗೆ ಅತೀವ ನೋವು ಉಂಟು ಮಾಡಿದೆ. ಶ್ರೀ ಶಿವಾನಂದ ಪಾಟೀಲರ ಧರ್ಮಪತ್ನಿ ಶ್ರೀಮತಿ ವಿಶಾಲಾಕ್ಷಿ ಅವರು, ಪುತ್ರ ಅಭಿಷೇಕ್, ಪುತ್ರಿ ಐಶ್ವರ್ಯಾ ಅವರಿಗೆ ಸಾಂತ್ವನ ಹೇಳಿದೆ. ಆ ದುಃಖತಪ್ತ ಕುಟುಂಬದ ಜತೆ ನಾನು ಹಾಗೂ ಇಡೀ ಜೆಡಿಎಸ್ ಪಕ್ಷ ಇರುತ್ತದೆ ಎಂದು ಮಕ್ಕಳಿಬ್ಬರಿಗೂ ಧೈರ್ಯ ತುಂಬಿದ್ದೇನೆ ಎಂದಿದ್ದಾರೆ.