ಕೋಲಾರ: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಟಾರ್ಗೆಟ್. ಅವರು ಎಲ್ಲಿ ನಿಲ್ಲುತ್ತಾರೋ ಅಲ್ಲಿಂದ ಬಿಜೆಪಿಯ ಸ್ಟ್ರಾಂಗ್ ಕ್ಯಾಂಡಿಡೇಟ್ ಹಾಕಬೇಕು ಎಂದಾಗಿತ್ತು. ವರುಣಾದಲ್ಲಿ ನಿಂತರೆ ಬಿಎಸ್ವೈ ಪುತ್ರ ವಿಜಯೇಂದ್ರ ಅವರನ್ನು ನಿಲ್ಲಿಸುವ ಪ್ಲ್ಯಾನ್ ನಲ್ಲಿತ್ತು ಬಿಜೆಪಿ. ಆದರೆ ಸಿದ್ದರಾಮಯ್ಯ ಕೋಲಾರ ಕ್ಷೇತ್ರ ಆಯ್ಕೆ ಮಾಡಿಕೊಂಡ ಬಳಿಕ ಬಿಜೆಪಿ ಪ್ಲ್ಯಾನ್ ಸೈಲೆಂಟ್ ಆಗಿತ್ತು. ಒಂದೊಳ್ಳೆ ಫೈಟ್ ಮಿಸ್ ಆಯ್ತು ಅಂತ ರಾಜಕೀಯ ಆಸಕ್ತಿದಾಯಕರು ಮನಸ್ಸಲ್ಲಿಯೇ ಬೇಸರ ಮಾಡಿಕೊಂಡು ಸುಮ್ಮನೆ ಆಗಿದ್ದರು.
ಆದರೆ ಬಿಜೆಪಿ ಮಾತ್ರ ಸಿದ್ದರಾಮಯ್ಯ ಅವರನ್ನು ಬಿಡುವಂತೆ ಕಾಣುತ್ತಿಲ್ಲ. ವರುಣಾ, ಬಾದಾಮಿ ಅಲ್ಲದೆ ಹೋದರೇ ಏನು ಕೋಲಾರದಲ್ಲೂ ಬರ್ತೀವಿ ಅಂತ ಅವರ ಹಿಂದೆ ಹೊರಟಿದ್ದಾರೆ. ಅದರಲ್ಲೂ ಪಕ್ಷ ಸಂಘಟನೆಯ ಚತುರ ಎಂದೇ ಖ್ಯಾತಿ ಪಡೆದಿರುವ ಬಿಎಲ್ ಸಂತೋಷ್ ಅಖಾಡಕ್ಕೆ ಇಳಿದಿದ್ದಾರೆ. ಸಾಲು ಸಾಲು ಸಭೆಗಳನ್ನು ಮಾಡಿದ್ದು, ಕೋಲಾರದ ಪ್ರವಾಸಕ್ಕೆ ಸಜ್ಜಾಗಿದ್ದಾರೆ.
ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಹೈವೋಲ್ಟೇಜ್ ಸಭೆ ನಡೆಸಿದ್ದು, ಈ ಬಾರಿ ಚುನಾವಣೆಯನ್ನು ಗೆಲ್ಲುವುದು ಹೇಗೆ..? ಪಕ್ಷ ಸಂಘಟನೆ ಮಾಡುವುದು ಹೇಗೆ..? ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದ್ದು, ಕೋಲಾರ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳನ್ನು ಕರೆಸಿ ಚರ್ಚೆ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಟಿಕೆಟ್ ಘೋಷಣೆಯನ್ನು ಯಾರು ಮಾಡಬಾರದು ಎಂದು ಪಕ್ಷದ ನಾಯಕರಿಗೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಸಿದ್ದರಾಮಯ್ಯ, ಬಹಳಷ್ಟು ಯೋಚನೆ ಮಾಡಿ, ಅಳೆದು ತೂಗಿ ಕೋಲಾರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇಲ್ಲಿಂದಾನೇ ಸ್ಪರ್ಧಿಸಿ ಗೆಲುವು ಕಾಣುವ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.