ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಜ.18): ಕರ್ನಾಟಕ ರಾಜ್ಯದ ನೊಳಂಬ ಲಿಂಗಾಯತ ಸಂಘ 12 ನೇ ಶತಮಾನದ ಶರಣ ಸಿದ್ದರಾಮೇಶ್ವರನ ಸಾಹಿತ್ಯ ಕುರಿತು ಕೆಲಸ ಮಾಡಿದವರಿಗೆ ಕೊಡ ಮಾಡುವ ಸಿದ್ದರಾಮ ಸಾಹಿತ್ಯ ವಿಶೇಷ ಪ್ರಶಸ್ತಿ ಚಿತ್ರದುರ್ಗದ ಇತಿಹಾಸ ಸಂಶೋಧಕ ಹಾಗೂ ಶಾಸನತಜ್ಞ ಡಾ.ಬಿ.ರಾಜಶೇಖರಪ್ಪನವರಿಗೆ ಲಭಿಸಿದೆ.
ಕಳೆದ 14 ರಂದು ತಿಪಟೂರಿನಲ್ಲಿ ನಡೆದ ಶ್ರೀ ಗುರುಸಿದ್ದರಾಮೇಶ್ವರರ 850 ನೇ ಜಯಂತಿ ಸುವರ್ಣ ಮಹೋತ್ಸವ-2023 ರ ಅಂಗವಾಗಿ ಏರ್ಪಡಿಸಿದ್ದ ಸಮ್ಮೇಳನದಲ್ಲಿ ಡಾ.ಬಿ.ರಾಜಶೇಖರಪ್ಪನವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕೆರೆಗೋಡಿ ರಂಗಾಪುರ ಮಠದ ಪರದೇಶಿಕೇಂದ್ರ ಮಹಾಸ್ವಾಮಿ, ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ, ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಮಂತ್ರಿ ಶೋಭ ಕರಂದ್ಲಾಜೆ, ಶಿಕ್ಷಣ ಮಂತ್ರಿ ಬಿ.ಸಿ.ನಾಗೇಶ್ ಇವರುಗಳು ಲಕ್ಷಾಂತರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ನೀಡಿದರು.
ಪ್ರಶಸ್ತಿಯು ಹತ್ತು ಸಾವಿರ ರೂ.ನಗದು, ಸನ್ಮಾನ ಪತ್ರ, ಸ್ಮರಣಿಕೆ ಒಳಗೊಂಡಿದೆ.
ಕೆರೆಗೋಡಿ ರಂಗಾಪುರ ಮಠದ 89 ವರ್ಷದ ಎಸ್.ಪರಶಿವಮೂರ್ತಿ ಮತ್ತು ಅವರ ಮಗ ಶಿವಕುಮಾರ್ ಹಾಗೂ ಚಂದ್ರಶೇಖರ್ ಇವರುಗಳು ತಮ್ಮ ತಾಯಿ ತಂದೆಯರ ಹೆಸರಿನಲ್ಲಿ ಸ್ಥಾಪಿಸಿರುವ ಟ್ರಸ್ಟ್ ಮೂಲಕ ಹಲವು ವರ್ಷಗಳಿಂದಲೂ ಸಿದ್ದರಾಮ ಸಾಹಿತ್ಯ ವಿಶೇಷ ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿದ್ದಾರೆ.