ಬೆಂಗಳೂರು: ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್ ನಲ್ಲಿ ಟಿಕೆಟ್ ಗೊಂದಲ ಶುರುವಾಗಿದೆ. ಅದರಲ್ಲೂ ಸಿದ್ದರಾಮಯ್ಯ ಅವರು ಎಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಪ್ರಶ್ನೆಗೆ, ಕುತೂಹಲಕ್ಕೆ ತೆರೆಯಂತು ಬಿದ್ದಿದೆ. ಕೋಲಾರದಲ್ಲಿ ನಿಲ್ಲಲಿದ್ದೇನೆ ಎಂದು ಅದಾಗಲೇ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಆದರೆ ಕೋಲಾರದಲ್ಲಿ ಸ್ಪರ್ಧೆ ಎಂದು ಅನೌನ್ಸ್ ಮಾಡಿದಾಗ ಸಿದ್ದರಾಮಯ್ಯ ಹಾಗೂ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಲವರು ತಮ್ಮ ಮನೆದೇವರಿಗೆ ಹೋಗಿದ್ದರು. ಈ ವೇಳೆ ವಿಶೇಷ ಪೂಜೆ ಸಲ್ಲಿಸಿದ್ದರು. ಆಗ ದೇವರು ಒಂದು ಕಡೆ ನಿಲ್ಲಬೇಡ, ಎರಡು ಕಡೆ ನಿಲ್ಲಬೇಕು. ಆಗ ಮಾತ್ರ ಗೆಲುವು ಎಂದು ಸೂಚನೆ ನೀಡಿತ್ತು. ಅಂದಿನಿಂದ ಸಿದ್ದರಾಮಯ್ಯ ಅವರ ಸ್ಪರ್ಧೆ ಬಗ್ಗೆ ಮತ್ತೆ ಚರ್ಚೆ ಶುರುವಾಗಿತ್ತು.
ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ತಂದೆಯನ್ನು ವರುಣಾದಲ್ಲಿಯೇ ನಿಲ್ಲುವಂತೆ ಕರೆಯುತ್ತಾ ಇದ್ದಾರೆ. ಆದರೆ ಕಾಂಗ್ರೆಸ್ ನಲ್ಲಿ ಒಬ್ಬರಿಗೆ ಒಂದೇ ಟಿಕೆಟ್ ಎಂಬ ನಿರ್ಧಾರವನ್ನು ಮಾಡಲಾಗಿದೆ. ಹೀಗಾಗಿ ಎರಡು ಕಡೆ ಟಿಕೆಟ್ ಸಿಗುವುದು ಕಷ್ಟಸಾಧ್ಯವಾಗಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ನೇರವಾಗಿ ಹೇಳಿದ್ದಾರೆ ಒಂದು ಕಡೆ ಸ್ಪರ್ಧೆ ಮಾಡುತ್ತೀನಿ ಅಂತ. ಒಂದು ಅರ್ಜಿ ಹಾಕಿದ್ದಾರೆ. ಈ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತೆ.
ಎರಡು ಕಡೆ ಸ್ಪರ್ಧೆ ಮಾಡುವ ಬಗ್ಗೆ ಇಷ್ಟೆಲ್ಲಾ ಅವಾಂತರಗಳು ಆಗುತ್ತಿರುವ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ, ನಾನು ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು. ಅದು ಕೋಲಾರದಲ್ಲಿ ಮಾತ್ರ. ಪದೇ ಪದೇ ಕೇಳಿದರೂ ನನ್ನ ಬಳಿ ಉತ್ತರ ಇರುವುದು ಅದೇ ಎಂದಿದ್ದಾರೆ.