ಚಿತ್ರದುರ್ಗ : ಪ್ರತಿಯೊಬ್ಬರೂ ತಮ್ಮ ಮಕ್ಕಳ ಹುಟ್ಟು ಹಬ್ಬವನ್ನ ಅಥವಾ ತಮ್ಮ ಹುಟ್ಟು ಹಬ್ಬಗಳನ್ನ ಸ್ಲಂ ಗಳಲ್ಲಿ ಆಚರಿಸಿ, ಬಡತನದಲ್ಲಿರುವ ಮಕ್ಕಳಿಗೆ ಸಿಹಿ ಹಂಚಿ, ಹೊಸ ಉಡುಪುಗಳನ್ನ ನೀಡಿ, ಅವರಿಗೆ ಓದಲು ಬರೆಯಲು ಬೇಕಾದಂತಹ ಸಾಮಗ್ರಿಗಳನ್ನ ನೀಡಿ, ತಮ್ಮ ಹುಟ್ಟುಹಬ್ಬಗಳನ್ನು ವಿಭಿನ್ನವಾಗಿ ಆಚರಿಸಿಕೊಳ್ಳಲು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ಎಚ್ ಕೆ ಎಸ್ ಸ್ವಾಮಿ ಮನವಿ ಮಾಡಿದ್ದಾರೆ.
ಬಡತನದ ರೇಖೆಯ ಕೆಳಗೆ ಇರುವ ಲಕ್ಷಾಂತರ ಜನರನ್ನ ಮೇಲೆತ್ತಲು, ಬಡತನದಲ್ಲಿ ಬಳಲಿ ಬೆಂಡಾಗಿರುವಂತಹ ದೇಶದ ನಾಗರೀಕರನ್ನು ಮೇಲೆತ್ತಲೂ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಸಹ ನಾವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಪ್ರತಿ ಹೆಜ್ಜೆ ಹೆಜ್ಜೆಗಳಲ್ಲೂ ಸಹ ನಾವು ಬಡತನ ನಿವಾರಣೆಯ ಬಗ್ಗೆ ಚಿಂತಿಸಬೇಕು. ಬಡತನದಲ್ಲಿರುವರಿಗೆ ಸಹಾಯ ಹಸ್ತವನ್ನು ಚಾಚಿ, ಅವರನ್ನು ಸಹ ಸಮಾನತೆಗೆ ತರಲು ಪ್ರಯತ್ನಿಸಬೇಕು ಎಂದಿದ್ದಾರೆ.
ಜನರನ್ನ ಬಡತನಕ್ಕೆ ದೂಡಿ, ಆ ಜನಾಂಗವನ್ನು ನಾವು ಹಿಂದುಳಿದ ಜಾತಿಗೆ, ಹಿಂದುಳಿದ ಪಟ್ಟಿಗೆ ಸೇರಿಸುವುದಕ್ಕಿಂತ ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮೇಲೆ ತರಲು ಪ್ರಯತ್ನಿಸಬೇಕು ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಂಜುನಾಥ್ ಮತ್ತು ಸುಜಾತ ದಂಪತಿಗಳ ಪುತ್ರಿಯಾದ ಅಮೂಲ್ಯ ಅವರ ಹುಟ್ಟುಹಬ್ಬವನ್ನು ಜಿಎಂಐಟಿ ವೃತ್ತದ ಬಳಿ ಇರುವ ಸ್ಲಂ ನಲ್ಲಿ ಆಚರಿಸಲಾಯಿತು.
ಮಕ್ಕಳಿಗೆ ಸಿಹಿ ಊಟವನ್ನು ವಿತರಿಸಿ, ಹೊಸ ಬಟ್ಟೆಗಳನ್ನ ನೀಡಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಜಯದೇವಮೂರ್ತಿ ಉಪಸ್ಥಿತರಿದ್ದರು. ಹೆಚ್ಎಸ್ ರಚನಾ ಮತ್ತು ಎಚ್ಎಸ್ ಪ್ರೇರಣ ಮಕ್ಕಳಿಗೆ ಗಾಯನದ ಮುಖಾಂತರ ಮನರಂಜಿಸಿದರು.