ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಜ.14) : ಅಧಿಕಾರ ಯಾರಪ್ಪನ ಆಸ್ತಿಯಲ್ಲ. ಇದ್ದಂತ ಸಂದರ್ಭದಲ್ಲಿ ಹತ್ತಾರು ಜನ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಬೇಕೆಂಬ ಅಭಿಲಾಷೆಯಿಟ್ಟುಕೊಂಡು ಹಗಲು ರಾತ್ರಿ ಕ್ಷೇತ್ರದ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದೇನೆಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ತಿಳಿಸಿದರು.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಭರಮಸಾಗರದಿಂದ ಹೆಗ್ಗೆರೆ ರಸ್ತೆವರೆಗೆ ನೂತನ ಸಿ.ಸಿ.ರಸ್ತೆ ಕಾಮಗಾರಿಗೆ ಶನಿವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.
ಹೊಳಲ್ಕೆರೆ ಕ್ಷೇತ್ರದ ಪ್ರತಿ ಹಳ್ಳಿಗಳಲ್ಲಿ ಜನರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ. ನಾಲ್ಕುವರೆ ವರ್ಷದಲ್ಲಿ ಮೂರು ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿದ್ದೇನೆ. ಕುಡಿಯು ನೀರು, ರಸ್ತೆ, ಶಾಲೆಗಳನ್ನು ಕಟ್ಟಿಸಿದ್ದೇನೆ. ರೈತರಿಗೆ ವಿದ್ಯುತ್ ಸಮಸ್ಯೆಯಾಗಬಾರದೆಂದು ಜೋಗ್‍ಫಾಲ್ಸ್‍ನಿಂದ ನೇರವಾಗಿ ವಿದ್ಯುತ್ ತರುವ ಕಾಮಗಾರಿಗೆ 250 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಇನ್ನು ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಮನೆ ಮನೆಗೆ ಕುಡಿಯುವ ನೀರಿನ ಜೊತೆಗೆ ಪೂಜ್ಯರ ಆಶೀರ್ವಾದಿಂದ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲಾಗಿದೆ. ಒಂದು ಲಕ್ಷ ಎಂಟು ಸಾವಿರ ಜನ ಮತ ನೀಡಿ ನಲವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದೀರಿ. ನಿಮ್ಮಗಳ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆಂದರು.
1994 ರಲ್ಲಿ ಮೊದಲ ಬಾರಿಗೆ ಭರಮಸಾಗರ ವಿಧಾನಸಭಾ ಕ್ಷೇತ್ರದಿಂದ ಬಾಣದ ಗುರುತಿನಿಂದ ಸ್ಪರ್ಧಿಸಿ ಗೆದ್ದಾಗ ಸರ್ಕಾರದಲ್ಲಿ ಅಷ್ಟೊಂದು ಹಣ ಇರುತ್ತಿರಲಿಲ್ಲ. ಅಂತಹ ಕಷ್ಟದ ಕಾಲದಲ್ಲಿಯೇ ಸಿ.ಸಿ.ರಸ್ತೆಗಳನ್ನು ಮಾಡಿಸಿದ್ದರಿಂದ ರಸ್ತೆರಾಜ ಎಂಬ ಬಿರುದು ನೀಡಿ ಜನ ಎರಡನೆ ಬಾರಿಗೆ ನನ್ನನ್ನು ಗೆಲ್ಲಿಸಿದರು. ಅಲ್ಲಿಂದ ಇಲ್ಲಿಯತನಕ ಯಾವ್ಯಾವ ಊರುಗಳಲ್ಲಿ ಏನೇನು ಸಮಸ್ಯೆಗಳಿದೆ ಎನ್ನುವುದನ್ನು ಹುಡುಕಿ ಹುಡುಕಿ ಕೆಲಸ ಮಾಡುತ್ತಿದ್ದೇನೆ.
ಚುನಾವಣೆಯಲ್ಲಿ ಮತ ಹಾಕುವುದು ಒಂದು ನಿಮಿಷದ ಕೆಲಸ. ಆಲೋಚನೆ ಮಾಡಿ ಯಾರು ಅಭಿವೃದ್ದಿ ಮಾಡುತ್ತಾರೆನ್ನುವುದನ್ನು ಚಿಂತಿಸಿ ಮತ ಚಲಾಯಿಸಿ ಎಂದು ಕ್ಷೇತ್ರದ ಜನರಲ್ಲಿ ವಿನಂತಿಸಿದರು.
ಡಿ.ವಿ.ಶರಣಪ್ಪ, ಭರಮಸಾಗರ ಬಿಜೆಪಿ.ಮಂಡಲ ಅಧ್ಯಕ್ಷ ಶೈಲೇಶ್, ಎನ್.ಕೆ.ರಾಜಣ್ಣ, ಡಿ.ಎಸ್.ಪ್ರವೀಣ್‍ಕುಮಾರ್, ಶ್ರೀಮತಿ ಕರಿಯಮ್ಮ, ವೀರೇಶ್, ಚಂದ್ರಶೇಖರ್ ಹಾಗೂ ಊರಿನ ಹಿರಿಯರು ಈ ಸಂದರ್ಭದಲ್ಲಿ ಹಾಜರಿದ್ದರು.