ಹಾವೇರಿ: ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಕುರಿತಾಗಿ ಕೋರ್ಟ್ ನಿಂದ ಸೂಚನೆ ಬಂದಿದ್ದೆ ತಡ, ಸಮುದಾಯದ ನಾಯಕರು ಮತ್ತಷ್ಟು ರೊಚ್ಚಿಗೆದ್ದಿದ್ದಾರೆ. ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯ ಶಿಗ್ಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ.
ಬಸವಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಶಿಗ್ಗಾವಿಯಲ್ಲಿ ಪ್ರತಿಭಟನೆ ನಡೆದಿದ್ದು, ಪ್ರತಿಭಟನೆಯ ಕಿಚ್ಚು ಜೋರಾಗಿ ನಡೆದಿದೆ. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಮಾತೃ ಮೇಲೆ ಆಣೆ ಮಾಡಿ ಮಾತು ತಪ್ಪಿದ ಸಿಎಂ ಬಸವರಾಜ ಬೊಮ್ಮಾಯಿ ಎಂದು ಘೋಷಣೆ ಕೂಗುತ್ತಾ ಧಿಕ್ಕಾರ ಹಾಕಿದ್ದಾರೆ.
ಜನರನ್ನು ನಿಭಾಯಿಸಲು ಪೊಲೀಸರು ಹರ ಸಾಹಸಪಟ್ಟಿದ್ದಾರೆ. ಆದರೂ ಪೊಲೀಸರನ್ನು, ಬ್ಯಾರಿಕೇಡ್ ಗಳನ್ನು ತಳ್ಳಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಗ್ಗಾಂವಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದಿದ್ದರು. ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ತಡೆ ನಡೆಸಿದ್ದಾರೆ. ಅಲ್ಲದೆ ಸಿಎಂ ಬೊಮ್ಮಾಯಿ ಅವರ ಪ್ರತಿಕೃತಿ ದಹನ ಮಾಡಿದ್ದಾರೆ.
ಶಾಸಕ ಬಸವನಗೌಡ ಯತ್ನಾಳ, ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ವಿಜಯಾನಂದ ಕಾಶಪ್ಪನವರ, ವಿನಯ ಕುಲಕರ್ಣಿ ಸೇರಿ ರಸ್ತೆಯಲ್ಲಿ ಕುಳಿತು ಸಿಎಂ ವಿರುದ್ಧ ಪ್ರತಿಭಟನೆ ಮಾಡಿದರು. ನಾಳೆಯಿಂದ ಬೆಂಗಳೂರಿನ ಫ್ರಿಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮುಂದುವರೆಯಲಿದೆ.