ಬೆಂಗಳೂರು: ಜನಾರ್ದನ ರೆಡ್ಡಿ ಬಿಜೆಪಿಯಿಂದ ಟಿಕೆಟ್ ಸಿಗದೆ ಇದ್ದ ಕಾರಣಕ್ಕಾಗಿ ಹೊಸ ಪಕ್ಷವನ್ನು ಸ್ಥಾಪನೆ ಮಾಡಿದ್ದಾರೆ. ಆ ಮೂಲಕ ಮುಂದಿನ ಚುನಾವಣೆಯಲ್ಲಿ ರಾಜಕೀಯ ಅಖಾಡಕ್ಕೆ ಇಳಿಯುವುದಕ್ಕೆ ಈಗಾಗಲೇ ಸಿದ್ಧತೆಯನ್ನು ನಡೆಸಿದ್ದಾರೆ. ಆದ್ರೆ ಇದೇ ಸಮಯದಲ್ಲಿ ಬಿಜೆಪಿ ಸರ್ಕಾರ ಜನಾರ್ದನ ರೆಡ್ಡಿಗೆ ಶಾಕ್ ನೀಡಿದೆ.
ಅಕ್ರಮ ಗಣಿಗಾರಿಕೆ ಆರೋಪವನ್ನು ಎದುರಿಸುತ್ತಿದ್ದ ಜನಾರ್ಧನ ರೆಡ್ಡಿಗೆ ಮತ್ತೊಮ್ಮೆ ಅದೇ ವಿಚಾರ ಮುಳುವಾಗಿದೆ. ಜನಾರ್ದನ ರೆಡ್ಡಿ, ತೆಲಂಗಾಣ ರಾಜ್ಯದಲ್ಲಿ ಸುಮಾರು 219 ಕಡೆಗಳಲ್ಲಿ ಆಸ್ತಿಯನ್ನು ಖರೀದಿ ಮಾಡಿದ್ದಾರೆ. ಆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಿಬಿಐ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿತ್ತು. ಆದರೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ ಸಿಬಿಐ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.
ಆಸ್ತಿ ಜಪ್ತಿ ಮಾಡುವ ವಿಚಾರ ಚರ್ಚೆಯಾದ ತಕ್ಷಣ ರಂಗಾರೆಡ್ಡಿ ಮತ್ತು ಕರ್ನೂಲ್ ಜಿಲ್ಲೆಯಲ್ಲಿರುವ ಆಸ್ತಿ ಮಾರಾಟ ಮಾಡುವುದಕ್ಕೆ ಎಲ್ಲಾ ರೀತಿಯಾದ ಪ್ಲ್ಯಾನ್ ಮಾಡಿದ್ದರು. ಬಳಿಕ ಮತ್ತೆ ಸಿಬಿಐ ಹೈಕೋರ್ಟ್ ಮೊರೆ ಹೋಗಿತ್ತು, ವಾದ ಮಂಡಿಸಿತ್ತು. ಐದು ಯಾಕೆ ಕ್ರಮ ಕೈಗೊಂಡಿಲ್ಲ ಅಂತ ಸರ್ಕಾರಕ್ಕೆ ಹೈಕೋರ್ಟ್ ನಿನ್ನೆ ಪ್ರಶ್ನೆ ಮಾಡಿತ್ತು. ಈ ಸಂಬಂಧ ಇದೀಗ ಇಂದು ಸರ್ಕಾರ ಅಸ್ತು ಎಂದಿದೆ.