ರಾಯಚೂರು: 2019ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆ ಮಾಡಿಕೊಂಡು ಆಡಳಿತ ನಡೆಸುತ್ತಾ ಇತ್ತು. ಆದ್ರೆ ಹದಿನೇಳು ಜನ ದಿಢೀರನೇ ರಾಜೀನಾಮೆ ಕೊಟ್ಟರು. ಮುಂಬೈ ಹೊಟೇಲ್ ನಲ್ಲಿ ಯಾರಿಗೂ ಸಿಗದಂತೆ ಕೂತು ಬಿಟ್ಟರು. ಅದರ ಮುಖ್ಯ ರುವಾರಿಯಾಗಿದ್ದ ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಇದೀಗ ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ.
ರಾಯಚೂರಿನಲ್ಲಿ ಈ ಬಗ್ಗೆ ಮಾತನಾಡಿದ ವಿಶ್ವನಾಥ್ ಅವರು, ರಾಜಕೀಯ ಅನ್ನೋದು ಒಂದು ಕುಟುಂಬವಿದ್ದಂತೆ. ಅದರಲ್ಲಿ ಅಣ್ಣ- ತಮ್ಮ ಮುನಿಸಿಕೊಂಡು ಹೊರ ಹೋಗುತ್ತಾರೆ. ಬಳಿಕ ವಾಪಾಸ್ ಬರುತ್ತಾರೆ ಅಲ್ವಾ. ಬಿಜೆಪಿಯಿಂದ ನನಗೆ ಹಾಗೂ ಪ್ರತಾಪ್ ಗೌಡಗೆ ಅನ್ಯಾಯವಾಗಿದೆ. ನನ್ನ ಸೋಲಿಗೆ ವಿಜಯೇಂದ್ರ ಬಹಳಷ್ಟು ಶ್ರಮಿಸಿದ್ದಾರೆ. ಸಿದ್ದರಾಮಯ್ಯ ನಾನು ಒಟ್ಟಿಗೆ ಬೆಳೆದವರು, ಒಟ್ಟಿಗೆ ಲಾ ಮಾಡಿದವರು. ನಾನು ಅವರಿಗಿಂತ ಹಿರಿಯನಾಗಿದ್ದೀನಿ.
ನಾನು ಫ್ರೀ ಬರ್ಡ್ ಬಹಳಷ್ಟು ಜನಕ್ಕೆ ಇದು ಗೊತ್ತಿದೆ. ನಾನು ಬಿಜೆಪಿ ಎಂಎಲ್ಸಿ ಅಲ್ಲ ಸಾಹಿತ್ಯ ಕ್ಷೇತ್ರದ ಎಂಎಲ್ಸಿಯಾಗಿದ್ದೇನೆ. ಸ್ಯಾಂಟ್ರೋ ರವಿ ಯಾರೆಂಬುದು ನನಗೆ ಗೊತ್ತಿಲ್ಲ. ಕುಮಾರಸ್ವಾಮಿ ಸುಮ್ಮನೆ ಗಾಳಿ ಸುದ್ದಿ ಬಿಟ್ಟಿದ್ದಾರೆ ಅಷ್ಟೆ. ಕುಮಾರಸ್ವಾಮಿ ಅವರು ರಾಜಕೀಯಕ್ಕಿಂತ ಮುಂಚೆ ಸಿನಿಮಾ ಕ್ಷೇತ್ರದಲ್ಲಿದ್ದವರು. ಸದ್ಯ ನಾನು ಉತ್ತರಾಯನ ಪುಣ್ಯ ಕಾಲಕ್ಕೂ ಮುಂಚೆ ಬಂದು ರಾಯರ ದರ್ಶನ ಪಡೆದಿದ್ದೇನೆ. ನನ್ನ ರಕ್ತವೇ ಕಾಂಗ್ರೆಸ್. ಮತ್ತೆ ಕಾಂಗ್ರೆಸ್ ಸೇರುತ್ತೇನೆ ಎಂದಿದ್ದಾರೆ.