ಬೆಂಗಳೂರು: ಸಿದ್ದು ನಿಜಕನಸುಗಳು ಪುಸ್ತಕದ ಮುಖಪುಟದಲ್ಲಿ, ಸಿದ್ದರಾಮಯ್ಯ ಅವರು ಖಡ್ಗ ಹಿಡಿದು, ಪೇಟ ತೊಟ್ಟಿರುವಂತೆ ಮುದ್ರಣವಾಗಿತ್ತು. ಈ ಪುಸ್ತಕವನ್ನು ಇಂದು ಬಿಜೆಪಿ ನಾಯಕರು ರಿಲೀಸ್ ಮಾಡುವುದಕ್ಕೆ ಸಿದ್ಧತೆ ನಡೆಸಿಕೊಂಡಿದ್ದರು. ಟೌನ್ ಹಾಲ್ ನಲ್ಲಿ ಸಚಿವ ಅಶ್ಚತ್ಥ್ ನಾರಾಯಣ್ ಈ ಪುಸ್ತಕವನ್ನು ಬಿಡುಗಡೆ ಮಾಡುವುದಕ್ಕೆ ಸಿದ್ಧತೆಯನ್ನು ನಡೆಸಿದ್ದರು. ಆದರೆ ಇದೀಗ ಪುಸ್ತಕ ಬಿಡುಗಡೆಗೆ ತಡೆ ನೀಡಲಾಗಿದೆ.
ಬುಕ್ ಬಿಡುಗಡೆ ಕಾರ್ಯಕ್ರಮಕ್ಕೆ ಸಿಟಿ ಸಿವಿಲ್ ಕೋರ್ಟ್ ತಡೆ ನೀಡಿದೆ. ಮುಂದಿನ ವಿಚಾರಣೆಯನ್ನು ಫೆ. 9ಕ್ಕೆ ಮುಂದೂಡಿಕೆಯಾಗಿದೆ. ಕೋರ್ಟ್ ನಿಂದ ತಡೆಯಾಜ್ಞೆ ಬಂದ ಕೂಡಲೇ ಆಯೋಜಕರು ಅಲರ್ಟ್ ಆಗಿದ್ದಾರೆ. ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಅವರು ಬಿಡುಗಡೆಗೊಳಿಸಬೇಕಿತ್ತು. ಟೌನ್ ಹಾಲ್ ನಲ್ಲಿಯೇ ಈ ಕಾರ್ಯಕ್ರಮ ನಡೆಯಲು ಸಿದ್ಧತೆ ನಡೆಸಲಾಗಿತ್ತು. ಕೆಪಿಸಿಸಿ ಕಾರ್ಯದರ್ಶಿ ಮನೋಹರ್ ಗೌಡ ನೇತೃತ್ವದಲ್ಲಿ ಪ್ರತಿಭಟನೆಯೂ ನಡೆದಿತ್ತು.
ಇನ್ನು ಸಿದ್ದು ನಿಜಕನಸುಗಳು ಎಂಬ ಪುಸ್ತಕದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದಂತೆ, ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಕೋರ್ಟ್ ಮೊರೆ ಹೋಗಿದ್ದರು. ಮಾನಹಾನಿ ಉದ್ದೇಶಿತ ಈ ಪುಸ್ತಕ ಬಿಡುಗಡೆಗೆ ತಡೆ ನೀಡುವಂತೆ ಮನವಿ ಮಾಡಿದ್ದರು. ಈ ಮನವಿ ಪುರಸ್ಕರಿಸಿದ್ದ ಕೋರ್ಟ್, ಪುಸ್ತಕ ಬಿಡುಗಡೆಗೆ ತಡೆ ನೀಡಿದೆ. ಈ ವಿಚಾರದ ಮಾಧ್ಯಮ ಪ್ರಸಾರಕ್ಕೂ ತಡೆ ನೀಡಿದೆ.