ದಾವಣಗೆರೆ: ರಾಜ್ಯ ಪ್ರವಾಸದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಬ್ಯುಸಿಯಾಗಿದ್ದರು. ಈ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಪ್ರಧಾನಿ ಮೋದಿ ಬಂದರೂ ಬಿಜೆಪಿ ಗೆಲ್ಲುವುದಿಲ್ಲ. ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದು ಮಾಟ, ಮಂತ್ರ ಮಾಡಿ ಬಿಡುತ್ತಾರಾ..? ಅವರೇನು ಮಾಟ ಮಂತ್ರದ ತಂಡ ಇಟ್ಟುಯಕೊಂಡಿದ್ದಾರಾ..? ಕೇಂದ್ರದಲ್ಲಿ ಮಂತ್ರಿಯಾಗಿರುವ ಕಾರಣಕ್ಕೆ ರಾಜ್ಯಕ್ಕೆ ಆಹ್ವಾನ ನೀಡಿದ್ದಾರೆ. ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶಕ್ಕೂ ಅಮಿತ್ ಶಾ ಹೋಗಿ ಬಂದಿದ್ದರು ಎಂದು ವ್ಯಂಗ್ಯವಾಡಿದ್ದಾರೆ.
ಅಮಿತ್ ಶಾ ಬಂದಾಕ್ಷಣ ಮೈಸೂರು ಭಾಗವನ್ನು ಬಿಜೆಪಿಯವರು ಗೆದ್ದು ಬಿಡುತ್ತಾರಾ..? ಮಹಾದಾಯಿ ಯೋಜನೆಗೆ ಒಪ್ಪಿಗೆ ಪಡೆಯುವುದಕ್ಕೆ ಎರಡು ವರ್ಷ ಬೇಕಾಯ್ತಾ. ಈಗ ಚುನಾವಣೆ ಹತ್ತಿರವಿದೆ ಹಾಗೂ ಕಾಂಗ್ರೆಸ್ ನಿಂದ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದೇವಲ್ಲ, ಈ ಕಾರಣಕ್ಕೆ ಕಳಸಾ-ಬಂಡೂರಿ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ.
ಬಿಜೆಪಿಯವರು ನಾಟಕಗಳು, ಗಿಮಿಕ್ ಗಳನ್ನು ಬಿಡಬೇಕು. ನಾವೂ ಸಮಾವೇಶ ಮಾಡಿ ವಾಸ್ತವ ವಿಚಾರಗಳನ್ನು ಜನರಿಗೆ ತಿಳಿಸುತ್ತೇವೆ. ಮೀಸಲಾತಿ ವಿಚಾರಕ್ಕೂ ಇನ್ನು ಪೂರ್ಣವಾದ ಮಾಹಿತಿ ಸಿಕ್ಕಿಲ್ಲ. ಯಾವ್ಯಾವ ಕೆಟಗರಿಗೆ ಎಷ್ಟೆಷ್ಟು ಕೊಡುತ್ತೇವೆ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಮೀಸಲಾತಿ ನೀಡುವುದು ಸಂವಿಧಾನಬದ್ಧವಾಗಿ ಆಗಿದೆಯೋ ಇಲ್ಲವೋ ನೋಡಬೇಕಾಗುತ್ತದೆ ಎಂದು ಬಿಜೆಪಿ ನಾಯಕರ ಮೇಲೆ ಹರಿಹಾಯ್ದಿದ್ದಾರೆ.