ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ,(ಡಿ.30): ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮತ ಕೇಳುವ ನೈತಿಕತೆಯಿಲ್ಲ ಎಂದು ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷ ಸಲೀಂ ಅಹಮದ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಜಿಲ್ಲೆಯ ಆರು ಕ್ಷೇತ್ರಗಳ ಸ್ಪರ್ಧಾಕಾಂಕ್ಷಿಗಳ ಜೊತೆ ಚುನಾವಣಾ ಸಮಿತಿ ಸಭೆ ನಡೆಸಿದ ನಂತರ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಆರು ತಾಲ್ಲೂಕಿನಿಂದ 57 ಆಕಾಂಕ್ಷಿಗಳು ಸ್ಪರ್ಧೆಗೆ ಅರ್ಜಿ ಸಲ್ಲಿಸಿದ್ದಾರೆ.
ನಾಲ್ಕು ಕ್ಷೇತ್ರದ ಆಕಾಂಕ್ಷಿಗಳು ಹಾಗೂ ಮುಖಂಡರುಗಳನ್ನು ಭೇಟಿ ಮಾಡಿದ್ದೇವೆ. ಎಲ್ಲರೂ ಟಿಕೇಟ್ ಕೇಳುತ್ತಿದ್ದಾರೆ. ಆದರೆ ಅಂತಿಮವಾಗಿ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದರಾಗಿದ್ದೇವೆ. ಯಾರನ್ನೆ ಅಭ್ಯರ್ಥಿಯನ್ನಾಗಿ ಮಾಡಲಿ ಅವರ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ್ದಾರೆ.
ರಾಜ್ಯದ ಹಿತಕ್ಕಾಗಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಮುಖ್ಯ. ರಾಜ್ಯದ 224 ಕ್ಷೇತ್ರಗಳಿಂದ ಸ್ಪರ್ಧೆ ಬಯಸಿ 1350 ಅರ್ಜಿಗಳು ಬಂದಿದೆ. ಎಲ್ಲಾ ಜಿಲ್ಲೆಗಳಿಗೂ ಹೋಗಿ ಮುಖಂಡರುಗಳನ್ನು ಭೇಟಿ ಮಾಡಿದ್ದೇವೆ. ಎ.ಐ.ಸಿ.ಸಿ.ಸಭೆ ಕೂಡ ನಡೆದಿದೆ. 150 ಸೀಟುಗಳನ್ನು ಗೆಲ್ಲುವುದು ನಮ್ಮ ಗುರಿ ಎಂದು ತಿಳಿಸಿದರು.
ಕಳಸಾ ಭಂಡೂರಿ ಯೋಜನೆಗೆ ಡಿ.ಪಿ.ಆರ್.ಮಾಡಲು ಡಬ್ಬಲ್ ಇಂಜಿನ್ ಸರ್ಕಾರಕ್ಕೆ ಮೂರು ವರ್ಷಗಳು ಬೇಕಾಯಿತ ಎಂದು ಪ್ರಶ್ನಿಸಿದ ಸಲೀಂ ಅಹಮದ್ ಪರಿಸರ, ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಸಿಕ್ಕಿದೆಯಾ? ಚುನಾವಣೆ ಹಿನ್ನೆಲೆಯಲ್ಲಿ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದನ್ನು ವಿರೋಧಿಸಿ ಜ.2 ರಂದು ಹೋರಾಟ ಮಾಡುತ್ತೇವೆ.
ಕೇಂದ್ರದಲ್ಲಿ ಬಿಜೆಪಿ.ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಜಾಸ್ತಿಯಾಗಿದೆ. ಇವೆಲ್ಲದರ ನಡುವೆ ನಲವತ್ತು ಪರ್ಸೆಂಟ್ ಕಮೀಷನ್ ಬೇರೆ. ಯಾವ ಪುರುಷಾರ್ಥಕ್ಕಾಗಿ ಬಿಜೆಪಿ ಜನಸಂಕಲ್ಪ ಯಾತ್ರೆ ಹೊರಟಿದೆ. ರಾಜ್ಯದ ಜನರ ಕ್ಷಮೆಯಾತ್ರೆ ನಡೆಸಲಿ ಎಂದು ಚೇಡಿಸಿದ ಸಲೀಂ ಅಹಮದ್ ಚಿಲುಮೆ ಸಂಸ್ಥೆ ಮೂಲಕ ಹುಬ್ಬಳ್ಳಿ, ಬಿಜಾಪುರ, ಬೆಂಗಳೂರಿನಲ್ಲಿ ಓಟುಗಳನ್ನು ಕದಿಯುವ ಕೆಲಸ ಮಾಡುತ್ತಿರುವ ಬಿಜೆಪಿ
ವಿರುದ್ದ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಇಬ್ಬರು ಐ.ಎ.ಎಸ್.ಅಧಿಕಾರಿಗಳನ್ನು ಅಮಾನತ್ತುಗೊಳಿಸಿದೆ. ಜಿಲ್ಲೆಯಲ್ಲಿ ಆರಕ್ಕೆ ಆರು ಸೀಟುಗಳನ್ನು ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವ ಭರವಸೆಯಿದೆ ಎಂದರು.
ಸಾಮೂಹಿಕ ನಾಯಕತ್ವದಲ್ಲಿ ಜ.11 ರಂದು ಬೆಳಗಾಂನಿಂದ ಬಸ್‍ಯಾತ್ರೆ ಇಪ್ಪತ್ತು ಜಿಲ್ಲೆಗಳಿಗೆ ಹೊರಟು ಬಿಜೆಪಿ ಭ್ರಷ್ಟಾಚಾರ ಹಾಗೂ ಕಾಂಗ್ರೆಸ್‍ನ ಸಾಧನೆಗಳನ್ನು ಜನತೆಗೆ ತಿಳಿಸಲಾಗುವುದು. 30 ರ ನಂತರ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಎರಡು ತಂಡಗಳು ರಾಜ್ಯದ 224 ಕ್ಷೇತ್ರಗಳಲ್ಲಿ ಸಂಚರಿಸಲಿದೆ.
ಭ್ರಷ್ಟಾಚಾರ ರಹಿತ, ಅಭಿವೃದ್ದಿ ಪರ ಸರ್ಕಾರ ನೀಡುವುದು ನಮ್ಮ ಗುರಿ. ಜ.15 ರೊಳಗೆ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ 150 ಸೀಟುಗಳನ್ನು ಅಂತಿಮಗೊಳಿಸಲಾಗುವುದೆಂದು ಹೇಳಿದರು.
ಎ.ಐ.ಸಿ.ಸಿ.ಕಾರ್ಯದರ್ಶಿ ಮಯೂರ್ ಜೈಕುಮಾರ್, ಕೆ.ಪಿ.ಸಿ.ಸಿ.ಉಪಾಧ್ಯಕ್ಷ ಹೆಚ್.ಆಂಜನೇಯ, ಪ್ರಧಾನ ಕಾರ್ಯದರ್ಶಿ ಹಾಗೂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಉಸ್ತುವಾರಿ ಮುರಳಿಧರ ಹಾಲಪ್ಪ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಶಾಸಕ ಟಿ.ರಘುಮೂರ್ತಿ, ಮಾಜಿ ಸಚಿವ ಡಿ.ಸುಧಾಕರ್, ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ, ಜಯಸಿಂಹ, ಬಾಲರಾಜ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.