ನೆಮ್ಮದಿ ಮತ್ತು ನಿರಾಳವಾಗಿ ಬದುಕಬೇಕಾದರೆ ಕುವೆಂಪುರವರ ಸಾಹಿತ್ಯ ಓದಬೇಕು : ಜೆ.ಯಾದವರೆಡ್ಡಿ

suddionenews
2 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ : ರಸ ಋಷಿ ಕುವೆಂಪುರವರು ಜಾತಿ ಮತ ಧರ್ಮಗಳನ್ನು ಮೀರಿ ಮನುಷ್ಯರಾಗಿ ಬೆಳೆಯಬೇಕೆಂಬ ಸಂದೇಶವನ್ನು ನೀಡಿದವರು ಎಂದು ಚಿತ್ರದುರ್ಗ ವಿಜ್ಞಾನ ಕೇಂದ್ರದ ಅಧ್ಯಕ್ಷ ಜೆ.ಯಾದವರೆಡ್ಡಿ ಹೇಳಿದರು.

ಚಿತ್ರದುರ್ಗ ವಿಜ್ಞಾನ ಕೇಂದ್ರ, ಸ್ವಾಸ್ಥ್ಯ ಸರ್ಕಲ್ ಫೌಂಡೇಶನ್ ವತಿಯಿಂದ ಇಲ್ಲಿನ ಪಿ.ವಿ.ಎಸ್.ಶಿಕ್ಷಣ ಮಹಾವಿದ್ಯಾಲಯದಲ್ಲಿ ಕುವೆಂಪು ಜನ್ಮದಿನದ ಅಂಗವಾಗಿ ಗುರುವಾರ ಏರ್ಪಡಿಸಲಾಗಿದ್ದ ವಿಶ್ವಮಾನವ ದಿನಾಚರಣೆ ಉದ್ಗಾಟಿಸಿ ಮಾತನಾಡಿದರು.

ಕ್ರಾಂತಿಕಾರಿ ಕನ್ನಡ ಪ್ರಜ್ಞೆಯುಳ್ಳವರಾಗಿದ್ದ ಕುವೆಂಪುರವರು ವಿದೇಶಕ್ಕೆ ಕನ್ನಡವನ್ನು ತೆಗೆದುಕೊಂಡು ಹೋದವರು. ಯಾವುದೇ ಶಿಫಾರಸ್ಸುಗಳಿಲ್ಲದೆ ಸ್ವಂತ ಪ್ರತಿಭೆ ಜ್ಞಾನದಿಂದ ಮೇಲೆ ಬಂದ ಕುವೆಂಪುರವರನ್ನು ಬಿ.ಇ.ಡಿ.ವಿದ್ಯಾರ್ಥಿಗಳು ಓದಲೇಬೇಕು.

ಅವರಷ್ಟು ಕನ್ನಡ ಸಾಹಿತ್ಯವನ್ನು ಓದಿದವರು ಬೇರೆ ಯಾರು ಇಲ್ಲ. ಹಾಗಾಗಿಯೇ ಅವರೊಬ್ಬ ಸಂವೇದನಶೀಲ ಕವಿಯಾಗಿದ್ದರು ಎಂದು ಸ್ಮರಿಸಿದರು.

ಅಲ್ಪಸಂಖ್ಯಾತರು ಆತಂಕದಿಂದ ನೆಮ್ಮದಿಯನ್ನು ಕಳೆದುಕೊಳ್ಳುವಂತಾಗಿದೆ. ಮನುಜಮತ, ವಿಶ್ವಪಥ ಎನ್ನುವ ಸಂದೇಶವನ್ನು ಸಾರಿದ ಕುವೆಂಪುರವರು ಮನುಷ್ಯತ್ವಕ್ಕಿಂತ ದೊಡ್ಡ ಧರ್ಮ ಯಾವುದೂ ಇಲ್ಲ ಎಂದು ಪ್ರತಿಪಾದಿಸಿದವರು.

ಸುತ್ತಮುತ್ತಲಿನ ಜನ, ಪರಿಸರವನ್ನು ಪ್ರೀತಿಸುವುದೇ ನಿಜವಾದ ದೇಶಭಕ್ತಿ ಎನ್ನುವುದು ಅವರ ವಾದವಾಗಿತ್ತು. ಆದರೆ ಈಗ ಧರ್ಮ ಜಾತಿ ಹೆಸರಿನ ಮೇಲೆ ಸಂಘರ್ಷ ನಡೆಯುತ್ತಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಇಡೀ ಮನುಷ್ಯ ಕುಲವೇ ಒಂದು ಎಂದು ಎಲ್ಲರೂ ಭಾವಿಸಿದರೆ ದೇಶ ಉಳಿಯಲು ಸಾಧ್ಯ. ಧರ್ಮ, ದೇವರು, ಪುರೋಹಿತಶಾಹಿಗಳಿಂದ ದೇಶ ರಕ್ತದಲ್ಲಿ ಮುಳುಗಿದೆ. ಎಲ್ಲಾ ಭಾಷೆ, ಸಂಸ್ಕøತಿ ಸೇರಿ ಭಾರತ ದೇಶವಾಗಿರುವುದು.

ಆದ್ದರಿಂದ ನಾವೆಲ್ಲರೂ ಮೊದಲು ಭಾರತೀಯರು ಎನ್ನುವ ಭಾವನೆ ಎಲ್ಲರಲ್ಲಿಯೂ ಬೆಳೆಯಬೇಕು. ಶಿಕ್ಷಣದಿಂದ ಮಾತ್ರ ಸಂಕುಚಿತ ಮನೋಭಾವನೆಯಿಂದ ಹೊರಬರಲು ಸಾಧ್ಯ. ಪುರೋಹಿತಶಾಹಿಗಳ ವಿರುದ್ದ 20 ನೇ ಶತಮಾನದಲ್ಲಿಯೇ ಕುವೆಂಪು ಕಹಳೆ ಊದಿದರು. ಆದರೆ ಈಗ ದೇಶದಲ್ಲಿ ಉಸಿರುಗಟ್ಟುವ ವಾತಾವರಣವಿದೆ. ನೆಮ್ಮದಿ ಮತ್ತು ನಿರಾಳವಾಗಿ ಎಲ್ಲರೂ ಬದುಕಬೇಕಾದರೆ ಕುವೆಂಪುರವರ ಸಾಹಿತ್ಯ ಓದಬೇಕು.

ಸಂವೇದನಾಶೀಲರಾಗಿದ್ದ ಕುವೆಂಪು ಮನುಷ್ಯ ಧರ್ಮಕ್ಕಿಂತ ದೊಡ್ಡ ಧರ್ಮ ಯಾವುದೂ ಇಲ್ಲವೆಂದಿದ್ದರು ಎಂದು ಬಿ.ಇ.ಡಿ.ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.
ಚಿತ್ರದುರ್ಗ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ.ಆರ್.ದಾಸೇಗೌಡ ಮಾತನಾಡುತ್ತ ಧರ್ಮ ದೇವರ ಹೆಸರಿನಲ್ಲಿ ನಡೆಯುತ್ತಿರುವ ಕಂದಾಚಾರ, ಮೂಢನಂಬಿಕೆ ದೇಶದ ಪ್ರಗತಿಗೆ ಅಡ್ಡವಾಗುತ್ತಿದೆ. ಮೌಢ್ಯದಲ್ಲಿ ಹೂತು ಹೋಗಿರುವವರು ಅದರಿಂದ ಹೊರಬರಬೇಕಾದರೆ ರಾಷ್ಟ್ರಕವಿ ಕುವೆಂಪುರವರ ವಿಚಾರಗಳನ್ನು ಅಧ್ಯಯನ ಮಾಡಬೇಕು. ವಿಶೇಷವಾಗಿ ಯುವ ಸಮೂಹ ಕುವೆಂಪುರವರ ಮಾರ್ಗದರ್ಶನದಂತೆ ನಡೆಯಬೇಕು ಎಂದು ಹೇಳಿದರು.

ಪಿ.ವಿ.ಎಸ್.ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಉಷ, ಚಿತ್ರದುರ್ಗ ವಿಜ್ಞಾನ ಕೇಂದ್ರದ ಖಜಾಂಚಿ ರಾಜ್‍ಕುಮಾರ್, ಸದಸ್ಯ ಖಲಂದರ್, ಜಯದೇವಮೂರ್ತಿ ವೇದಿಕೆಯಲ್ಲಿದ್ದರು.
ವಿಶ್ವಮಾನವತೆ ಬಗ್ಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಬಿ.ಇ.ಡಿ. ಪ್ರಶಿಕ್ಷಣಾರ್ಥಿಗಳಿಗೆ ಮೂರ್ತಪ್ಪ ಬಹುಮಾನ ವಿತರಿಸಿದರು.

Share This Article
Leave a Comment

Leave a Reply

Your email address will not be published. Required fields are marked *