ಸುದ್ದಿಒನ್, ಚಿತ್ರದುರ್ಗ, (ಅ.03) : ಬರೋಬ್ಬರಿ ಒಂಭತ್ತು ಗಂಟೆಗಳ ಬೃಹತ್ ಮೆರವಣಿಗೆ ಬಳಿಕ ಶನಿವಾರ ರಾತ್ರಿ 10.30 ಕ್ಕೆ ಹಿಂದೂ ಮಹಾಗಣಪತಿ ವಿಸರ್ಜನೆ ನಡೆಯಿತು.
ಶನಿವಾರ ಬೆಳಗ್ಗೆ 12.30ಕ್ಕೆ ಬಜರಂಗದಳ- ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ಪ್ರಾರಂಭವಾದ ವಿಸರ್ಜನಾ ಮೆರವಣಿಗೆ ರಾತ್ರಿ 9.45 ರ ವೇಳೆಗೆ ಚಂದ್ರವಳ್ಳಿಯ ವಿಸರ್ಜನಾ ಸ್ಥಳ ತಲುಪಿತು. ಬಳಿಕ ಪೂಜಾ ವಿಧಿವಿಧಾನ ನೆರವೇರಿಸಿದ ಬಳಿಕ ಕ್ರೈನ್ ಮೂಲಕ ಗಣಪತಿಯನ್ನು ವಿಸರ್ಜಿಸಲಾಯಿತು.
ಗಣಪತಿಯನ್ನು ಕ್ರೈನ್ ಮೂಲಕ ಬೃಹತ್ ನೀರಿನ ಹೊಂಡದ ಮೇಲೆ ತರುತ್ತಿದ್ದಂತೆ ನೆರದಿದ್ದ ಭಕ್ತರು ಪುಷ್ಪರ್ಚನೆ ಮಾಡಿದರು. ಇದರಿಂದ ಇಡೀ ಹೊಂಡ ಹೂವಿನಿಂದ ಶೃಂಗಾರಗೊಂಡಿತು. ಅಪಾರ ಜಯಘೋಷಗಳ ನಡುವೆ ಗಣಪತಿಯನ್ನು ಗಂಗೆ ಮಡಿಲಿಗೆ ಅರ್ಪಿಸಲಾಯಿತು.
ವಿಸರ್ಜನಾ ಸ್ಥಳಕ್ಕೆ ಗಣೇಶನನ್ನು ಕರೆ ತಂದು ಬರೋಬ್ಬರಿ ಒಂದು ಗಂಟೆಯಾದರೂ ಸಹ ಚಿಕ್ಕ ಮಗುವಿನಂತೆ ಮುನಿಸಿಕೊಂಡಿದ್ದರಿಂದ ಜನರು ಸಹ ಬಾರದ ಮನಸ್ಸಿನಿಂದ ಕಳುಹಿಸಿಕೊಡಲು ಮುಂದಾದರು. ಕೋಟೆನಾಡಿನ ಜನರ ಪ್ರೀತಿಗೆ ಮನಸೋತ ಗಂಗಾಮಾತೆ ಕೂಡ ಒಲ್ಲದ ಮನಸ್ಸಿನಿಂದ ಮಗನನ್ನು ನಿಧಾನವಾಗಿ ತನ್ನ ಮಡಿಲಿಗೆ ಹಾಕಿಕೊಂಡಂತೆ ಇಡೀ ದೃಶ್ಯ ಭಾಸವಾಯಿತು.
ಸಾವಿರ ದಾಟಿದ ಲೈವ್ ; ಗಣಪತಿ ವಿಸರ್ಜನೆ ಸ್ಥಳದಲ್ಲೇ ಸಾವಿರಾರೂ ಜನ ನೆರದಿದ್ದರೇ, ಇತ್ತ ನೇರ ಪ್ರಸಾರವನ್ನು ಸಾವಿರಕ್ಕೂ ಹೆಚ್ಚು ಕ್ಷಣ ವೀಕ್ಷಿಸಿದರು. ಅಷ್ಟೇ ಅಲ್ಲದೆ ಸೋಷಿಯಲ್ ಮೀಡಿಯಾದಲ್ಲೇ ಇಡೀ ಮೆರವಣಿಗೆಯನ್ನು ಲಕ್ಷಾಂತರ ಜನ ವೀಕ್ಷಿಸಿ ಭಕ್ತಿ ಸಮರ್ಪಿಸಿದರು.