ಕರ್ನಾಟಕ ಸರ್ಕಾರ ನಡೆಸುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆಯನ್ನು ಕರ್ನಾಟಕ ಪ್ರಾಧಿಕಾರಕದ ಮೂಲಕವೇ ನಡೆಸಲು ಸರ್ಕಾರ ಸೂಚನೆ ನೀಡಿದೆ. ಉನ್ನತ ಶಿಕ್ಷಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಶೀತಲ್ ಎಂ. ಹಿರೇಮಠ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ.
ವಿಶ್ವವಿದ್ಯಾಲಯ ಧನಸಹಾಯ ಆಯೋಗವು 19/12/2019ರಂದು ನಡೆದ ಸಭೆಯಲ್ಲಿ ಮಾನ್ಯತೆ ಸಮಿತಿಯ ಶಿಫಾರಸ್ಸುಗಳ ಆಧಾರದ ಮೇಲೆ ಕರ್ನಾಟಕ ರಾಜ್ಯದ ಪರವಾಗಿ 3 KSET ಪರೀಕ್ಷೆಗಳನ್ನು ನಡೆಸಲು ಮೈಸೂರು ವಿಶ್ವವಿದ್ಯಾಲಯಕ್ಕೆ ಮಾನ್ಯತೆಯನ್ನು ನೀಡಲು ನಿರ್ಧರಿಸಿ, 41 ವಿಷಯಗಳಲ್ಲಿ 14/01/2020ರಿಂದ 3 ವರ್ಷಗಳವರೆಗೆ ಕೆ-ಸೆಟ್ ಪರೀಕ್ಷೆಯನ್ನು ನಡೆಸಲು ಮಾನ್ಯತೆಯನ್ನು ನೀಡಿರುತ್ತದೆ. 2022ನೇ ಶೈಕ್ಷಣಿಕ ಸಾಲಿನಲ್ಲಿ ಆಯಾ ರಾಜ್ಯ ಸರ್ಕಾರಗಳು ಗುರುತಿಸಿರುವ ರಾಜ್ಯ ನೋಡಲ್ ಏಜೆನ್ಸಿಗಳಿಗೆ ಯುಜಿಸಿಯಿಂದ ಮಾನ್ಯತೆ ಅಗತ್ಯವಿರುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (K-SET) ಯನ್ನು ನಡೆಸಲು ಮೈಸೂರು ವಿಶ್ವವಿದ್ಯಾಲಯಕ್ಕೆ ಅನುಮತಿ ನೀಡಲಾಗಿರುತ್ತದೆ.
ಆದರೆ, ಮೈಸೂರು ವಿಶ್ವವಿದ್ಯಾಲಯದಲ್ಲಿ ಜುಲೈ-2021 ರಲ್ಲಿ ನಡೆದ ಕೆ-ಸೆಟ್ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಹಾಗೂ ಈ ಪ್ರಕ್ರಿಯೆಗೆ ಮೈಸೂರು ವಿಶ್ವವಿದ್ಯಾಲಯದ ಕೆ-ಸೆಟ್ ಪರೀಕ್ಷೆಯ ಸಂಯೋಜಕರು ಹಾಗೂ ಇತರರು ಸಂಪೂರ್ಣ ಹೊಣೆಗಾರರೆಂದು ದೂರುಗಳು ಬಂದಿದ್ದು, ಈ ಬಗ್ಗೆ ಪ್ರತ್ಯೇಕ ತನಿಖೆಗೆ ಸಮಿತಿ ರಚಿಸಿ ಆದೇಶಿಸಲಾಗಿದೆ. 17/12/2022ರಂದು ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಯುಜಿಸಿಯಿಂದ ಮಾನ್ಯತೆ ಅಗತ್ಯವಿರುವ ರಾಜ್ಯ ಅರ್ಹತಾ ಪರೀಕ್ಷೆಯನ್ನು ನಡೆಸಲು ಯುಜಿಸಿಯ ಪರಿಕಲ್ಪನೆ ಮತ್ತು ವ್ಯಾಪ್ತಿಯಡಿ ರಾಜ್ಯ ಸರ್ಕಾರವು ಒಂದು ಏಜೆನ್ಸಿಯನ್ನು ಗುರುತಿಸಬಹುದು, ಅದು ವಿಶ್ವವಿದ್ಯಾನಿಲಯವಾಗಿರಬಹುದು ಅಥವಾ ಪ್ರತಿಷ್ಠಿತ ಪರೀಕ್ಷಾ ಸಂಸ್ಥೆ ಅಥವಾ ಉನ್ನತ ಶಿಕ್ಷಣಕ್ಕಾಗಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಪ್ರತಿಷ್ಠಿತ ಸಂಸ್ಥೆಯಾಗಿರಬಹುದು.