ಶಿಕ್ಷಣದ ಜೊತೆ ಸಾಮಾನ್ಯ ವಿಷಯವನ್ನು ಮಕ್ಕಳಿಗೆ ಹೇಳಿಕೊಡಬೇಕು : ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ.

suddionenews
3 Min Read

ಚಿತ್ರದುರ್ಗ : ಆಂಗ್ಲ ಭಾಷೆ ಕಷ್ಟ ಎನ್ನುವ ಭಯ ಮಕ್ಕಳ ಮನಸ್ಸಿಗೆ ನಾಟದಂತೆ ಸರಳವಾಗಿ ಕಲಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಶಿಕ್ಷಕರುಗಳಿಗೆ ಕರೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಾಕ್ಷರತಾ ಇಲಾಖೆ ವತಿಯಿಂದ ಜಿಲ್ಲೆಯ ಎಲ್ಲಾ ಪ್ರೌಢಶಾಲಾ ಆಂಗ್ಲ ಶಿಕ್ಷಕರುಗಳಿಗೆ ತ.ರಾ.ಸು.ರಂಗಮಂದಿರದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಒಂದು ದಿನದ ಪುನಶ್ಚೇತನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಇಂಗ್ಲಿಷ್ ಒಂದು ಭಾಷೆಯನ್ನಾಗಿ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಸರಳವಾಗಿ ಹೇಳಿಕೊಡಬೇಕು. ಓದುವುದು, ಬರೆಯುವುದು, ಮಾತನಾಡುವುದು ಕಷ್ಟ ಎನ್ನುವ ಭಯವನ್ನು ಮಕ್ಕಳ ಮನಸ್ಸಿನಿಂದ ತೆಗೆಯುವ ಕೆಲಸವಾಗಬೇಕು. ಪ್ರಾಥಮಿಕ ಹಂತದಲ್ಲಿ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಜಾಸ್ತಿಯಿರುತ್ತದೆ. ಹಾಗಾಗಿ ಶಿಕ್ಷಣದ ಜೊತೆ ಸಾಮಾನ್ಯ ವಿಷಯವನ್ನು ಮಕ್ಕಳಿಗೆ ಹೇಳಿಕೊಡುವ ನಿಟ್ಟಿನಲ್ಲಿ ಶಿಕ್ಷಕರುಗಳು ಕೆಲಸ ಮಾಡಿದಾಗ ಮಾತ್ರ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.

ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಚಿತ್ರದುರ್ಗ ಜಿಲ್ಲೆ ಮುಂದೆ ಬರಬೇಕಾದರೆ ಶಿಕ್ಷಣಕ್ಕೆ ಒತ್ತು ಕೊಡಬೇಕು. ನಾನು ಐ.ಎ.ಎಸ್. ಪಾಸಾಗಿ ಜಿಲ್ಲಾಧಿಕಾರಿಯಾಗಿದ್ದೇನೆಂದರೆ ನನಗೆ ಒಂದನೆ ತರಗತಿ ಶಿಕ್ಷಕರೊಬ್ಬರು ಕಾರಣ ಎಂದು ನೆನಪಿಸಿಕೊಂಡರು. ಕನಸಿನ ಜೊತೆ ಕಠಿಣ ಪರಿಶ್ರಮ ಮುಖ್ಯ. ಚಟುವಟಿಕೆಯಲ್ಲಿ ಬದಲಾವಣೆ ಕಂಡುಕೊಳ್ಳುವುದೇ ನಿಜವಾದ ಶಿಕ್ಷಣ. ಶಾಲೆಯಲ್ಲಿ ಯಾವುದೇ ಪಠ್ಯವಿಷಯವಾಗಲಿ ಅರ್ಥವಾಗುವ ರೀತಿಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡಬೇಕು. ಕಳೆದ ಬಾರಿ ನಾಲ್ಕನೆ ಸ್ಥಾನದಲ್ಲಿರುವ ಚಿತ್ರದುರ್ಗ ಜಿಲ್ಲೆಯನ್ನು ಈ ಬಾರಿಯ ಹತ್ತನೆ ತರಗತಿ ಪರೀಕ್ಷೆಯಲ್ಲಿ ರಾಜ್ಯಲ್ಲಿಯೇ ಒಂದನೇ ಸ್ಥಾನಕ್ಕೆ ತೆಗೆದುಕೊಂಡು ಹೋಗಬೇಕು. ಗುರುವನ್ನು ನೋಡದೆ ದೇವರನ್ನು ಕಾಣಲು ಸಾಧ್ಯವಿಲ್ಲ. ಓದಿನಲ್ಲಿ ಯಾರು ಹಿಂದೆಯಿದ್ದಾರೋ ಅಂತಹ ಮಕ್ಕಳ ಕಡೆ ಶಿಕ್ಷಕರುಗಳು ಹೆಚ್ಚಿನ ನಿಗಾ ಹರಿಸಬೇಕು ಎಂದು ತಿಳಿಸಿದರು.

ಮಕ್ಕಳಲ್ಲಿ ಯಾವ ಪ್ರತಿಭೆಯಿದೆ ಎನ್ನುವುದನ್ನು ಮೊದಲು ಶಿಕ್ಷಕರು ತಿಳಿದುಕೊಂಡು ಅದಕ್ಕೆ ತಕ್ಕಂತೆ ಪ್ರೋತ್ಸಾಹ ನೀಡಬೇಕು. ಜೀವನದಲ್ಲಿ ನಿರ್ಧಿಷ್ಠವಾದ ಗುರಿ ಮುಟ್ಟಬೇಕಾದರೆ ನಂಬಿಕೆ, ಆತ್ಮವಿಶ್ವಾಸವಿರಬೇಕು. ನಕಾರಾತ್ಮಕ ಯೋಚನೆಯನ್ನು ಇಟ್ಟುಕೊಳ್ಳಬಾರದು. ಕುಂದು ಕೊರತೆ ಅಡೆತಡೆಗಳನ್ನು ಹೇಗೆ ನಿಭಾಯಿಸಿಕೊಂಡು ಮುಂದೆ ಸಾಗಬೇಕು ಎನ್ನುವುದನ್ನು ಶಿಕ್ಷಕರುಗಳು ಮಕ್ಕಳಿಗೆ ಹೇಳಿಕೊಟ್ಟಾಗ ಸದೃಢ ಸಮಾಜ ನಿರ್ಮಾಣ ಮಾಡಬಹುದು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ದಿವಾಕರ್ ಮಾತನಾಡುತ್ತ ನಾನು ಅಧಿಕಾರ ವಹಿಸಿಕೊಂಡಾಗ ಮೊದಲು ಜಿಲ್ಲೆಯ ಕೆಲವು ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ಕಡಿಮೆಯಿರುವುದು ಕಂಡು ಬಂದಿತು. ಇದಕ್ಕೆ ಗ್ರಾಮೀಣ ಪ್ರದೇಶಗಳಲ್ಲಿರುವವರು ತಮ್ಮ ಮಕ್ಕಳು ಇಂಗ್ಲಿಷ್ ಕಲಿಯಲಿ ಎನ್ನುವ ಆಸೆಯಿಂದ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ. ಸರ್ಕಾರ ಮಕ್ಕಳಿಗೆ ಎಲ್ಲಾ ರೀತಿಯ ಸವಲತ್ತುಗಳನ್ನು ಒದಗಿಸುತ್ತಿದೆ. ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಸರಿಯಾಗಿ ನಡೆಯಬೇಕಾದರೆ ಇಂಗ್ಲಿಷ್ ಶಿಕ್ಷಕರುಗಳ ಪಾತ್ರ ಬಹಳ ಮುಖ್ಯ ಎಂದು ತಿಳಿಸಿದರು.

ಎಲ್ಲಾ ರಂಗದಲ್ಲಿಯೂ ಸ್ಪರ್ಧೆ ಏರ್ಪಟ್ಟಿರುವುದರಿಂದ ಇಂಗ್ಲಿಷ್ ಕಲಿಕೆ ಅನಿವಾರ್ಯ. ಆದರೆ ಇಂಗ್ಲಿಷ್ ಭಾಷೆಯೇ ಜೀವನವಾಗಬಾರದು. ಶಿಕ್ಷಕರುಗಳು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಉಳಿದುಕೊಂಡು ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಮಕ್ಕಳು ಬರುವಂತೆ ನೋಡಿಕೊಳ್ಳಿ. ಶಿಕ್ಷಣ ನೀಡುವುದರ ಜೊತೆ ಮಕ್ಕಳ ಮನಸ್ಸನ್ನು ಗೆದ್ದರೆ ಉತ್ತಮ ನಾಗರೀಕರನ್ನು ತಯಾರು ಮಾಡಿದಂತಾಗುತ್ತದೆ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್‍ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ಬಾರಿಯ ಫಲಿತಾಂಶದಲ್ಲಿ ಚಿತ್ರದುರ್ಗ ಜಿಲ್ಲೆ ನಾಲ್ಕನೆ ಸ್ಥಾನ ಪಡೆದಿದ್ದು, 2022-23 ನೇ ಸಾಲಿನಲ್ಲಿ ನಡೆಯುವ ಹತ್ತನೆ ತರಗತಿ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆಯನ್ನು ರಾಜ್ಯದಲ್ಲಿಯೇ ಒಂದನೆ ಸ್ಥಾನಕ್ಕೆ ತೆಗೆದುಕೊಂಡು ಹೋಗಬೇಕಾಗಿರುವುದರಿಂದ ಈಗಾಗಲೆ ಎಲ್ಲಾ ರೀತಿಯ ಪರಿಶ್ರಮ ಹಾಕಲಾಗುತ್ತಿದ್ದು, ಮಕ್ಕಳನ್ನು ಅಣಿಗೊಳಿಸಲಾಗುತ್ತಿದೆ ಎಂದು ಹೇಳಿದರು.

ಸಿಟಿಇ. ಪದನಿಮಿತ್ತ ಸಹ ನಿರ್ದೇಶಕ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ, ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ ತಿಪ್ಪೇಸ್ವಾಮಿ ಸಿ.ಎಂ. ಶಿಕ್ಷಣಾಧಿಕಾರಿ ಮಂಜುನಾಥಸ್ವಾಮಿ, ವಿಷಯ ಪರಿವೀಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿ ಕಿಶೋರ್‍ಕುಮಾರ್ ವೇದಿಕೆಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *