ಸುದ್ದಿಒನ್, ಚಿತ್ರದುರ್ಗ, (ಅ.02) : ಹಿಂದೂ ಮಹಾಗಣಪತಿಯ 21 ದಿನಗಳ ಭವ್ಯ ಸಂಭ್ರಮಕ್ಕೆ ಶನಿವಾರ ತೆರೆಬಿದ್ದಿತು.
ಕೋವಿಡ್ ಕಾರಣಕ್ಕೆ ಕಳೆದ ವರ್ಷ ಕಳೆಗುಂದಿದ್ದ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ಈ ವರ್ಷ ಆ ಕರಾಳ ಛಾಯೆಯಿಂದ ಹೊರ ಬಂದಿತು. ಜಿಲ್ಲಾಡಳಿತ ಶೋಭಾಯಾತ್ರೆ, ಡಿಜೆಗೆ ಅವಕಾಶ ನೀಡದಿದ್ದರು ಸಹ ಲಕ್ಷಾಂತರ ಭಕ್ತರು ಸಂಭ್ರಮಕ್ಕೆ ಸಾಕ್ಷಿಯಾದರು.
ಮಧ್ಯಾಹ್ನ 12.30 ರ ಸುಮಾರಿಗೆ ಶುರುವಾದ ವಿಸರ್ಜನಾ ಮೆರವಣಿಗೆ ನಿರೀಕ್ಷೆ ಮೀರಿ ಜನರು ಬಂದ ಕಾರಣ ತಡವಾಯಿತು. ಬಿಸಿಲನ್ನು ಲೆಕ್ಕಿಸದೆ ಜನರು ಮೆರವಣಿಗೆಯಲ್ಲಿ ಸಾಗಿದರು.
ಮದಕರಿನಾಯಕನ ವೃತ್ತ, ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಸಂಗೋಳ್ಳಿ ರಾಯಣ್ಣ ವೃತ್ತ ಹಾಗೂ ಕನಕ ವೃತ್ತದಲ್ಲಿ ಜನತೆ ಕಿಕ್ಕಿರಿದು ಜಮಾಯಿಸಿದ್ದರು. ಪ್ರವಾಸಿ ಮಂದಿರದಿಂದ ಮೆರವಣಿಗೆ ಮುಂದೆ ಬರುತ್ತಿದ್ದಂತೆ ಕಟ್ಟಡಗಳ ಮೇಲಿದ್ದ ಜನರ ಸಂಭ್ರಮ ಮುಗಿಲು ಮುಟ್ಟಿತ್ತು.
ಎತ್ತ ತಿರುಗಿದರು ಸಹ ಜನವೋ..ಜನ ಕಂಡು ಬಂದರು. ಡಿಜೆ ಇಲ್ಲದಿದ್ದರು ಸಹ ಗಣಪತಿ ಮೆರವಣಿಗೆಗೆ ಜನರು ಆಗಮಿಸುತ್ತಾರೆ ಎಂಬುದು ಈ ಬಾರಿ ನಿಜವಾಯಿತು.
ಯುವಕ, ಯುವತಿಯರು, ಮಕ್ಕಳು, ಹಿರಿಯರು ಹೀಗೆ ಎಲ್ಲ ವಯಸ್ಸಿನವರು ಭವ್ಯ ಮೆರವಣಿಗೆಗೆ ಸಾಕ್ಷಿಯಾದರು. ಕೋವಿಡ್ ಕಾರಣಕ್ಕೆ ನೀರು, ಪ್ರಸಾದ ವಿತರಿಸದ ಕಾರಣ ಬಿಸಿಲಿಗೆ ಬಾಯಾರಿದ ಜನತೆ ಹೋಟೆಲ್‍ಗಳನ್ನು ಹುಡುಕುತ್ತಾ ಹೋಗಬೇಕಾಯಿತು. ಮುಖ್ಯ ರಸ್ತೆಯ ಹೋಟೆಲ್‍ಗಳು ಬಾಗಿಲು ಮುಚ್ಚಿದ್ದರಿಂದ ಸಮಸ್ಯೆ ಅನುಭವಿಸಿದರು.
ರಸ್ತೆಯುದ್ದಕ್ಕೂ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ಅಹಿತಕರ ಘಟನೆ ನಡೆಯದಂತೆ ಮೆರವಣಿಗೆಯಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಜತೆಗೆ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ನೇತೃತ್ವದ ತಂಡ ಸಹ ಎಲ್ಲಿಯೂ ಸಮಸ್ಯೆ ಆಗದಂತೆ ಎಚ್ಚರವಹಿಸಿತ್ತು.