Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಫೆಬ್ರವರಿ 8 ಮತ್ತು 9 ರಂದು ವಾಲ್ಮೀಕಿ ಜಾತ್ರೆ : ಪ್ರಸನ್ನಾನಂದಪುರಿ ಸ್ವಾಮೀಜಿ

Facebook
Twitter
Telegram
WhatsApp

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ : ಐತಿಹಾಸಿಕ ಚಿತ್ರದುರ್ಗದ ಏಳುಸುತ್ತಿನ ಕೋಟೆಯನ್ನು ಆಳಿದ ಸಾಂಸ್ಕೃತಿಕ ನಾಯಕ ರಾಜವೀರಮದಕರಿನಾಯಕ ಥೀಂ ಪಾರ್ಕ್ ನೆನೆಗುದಿಗೆ ಬಿದ್ದಿದ್ದು, ಇದಕ್ಕೆ ನಮ್ಮಲ್ಲಿನ ಸಂಘಟನೆ ಕೊರತೆ ಕಾರಣ. ಜಿಲ್ಲೆಯ ಎಲ್ಲಾ ಶಾಸಕರು ಜಿಲ್ಲಾಧಿಕಾರಿ ಸಭೆ ಕರೆದು ಮೊದಲು ಚಿತ್ರದುರ್ಗದ ಸುತ್ತಮುತ್ತ ಜಾಗ ಗುರುತಿಸಿ ವಿಧಾನಸಭೆ ಚುನಾವಣೆಯೊಳಗೆ ಭೂಮಿ ಪೂಜೆ ಮಾಡದಿದ್ದರೆ ಬಿಜೆಪಿಯನ್ನು ಸಾರಸಗಟಾಗಿ ತಿರಸ್ಕರಿಸುವುದಾಗಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಫೆ.8 ಮತ್ತು 9 ರಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ನಡೆಯುವ ಐದನೆ ವರ್ಷದ ವಾಲ್ಮೀಕಿ ಜಾತ್ರೆ ಪ್ರಯುಕ್ತ ನಗರದ ಹೊರವಲಯದಲ್ಲಿರುವ ಬಿಗ್‍ಬಾಸ್ ಹೋಟೆಲ್‍ನಲ್ಲಿ ಬುಧವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.
ಕೇಂದ್ರ ಗೃಹ ಮಂತ್ರಿ ಅಮಿತ್‍ಷಾ ಎರಡು ವರ್ಷಗಳ ಹಿಂದೆ ಚಿತ್ರದುರ್ಗಕ್ಕೆ ಬಂದಾಗಲೆ ರಾಜಾವೀರಮದಕರಿನಾಯಕ ಥೀಂ ಪಾರ್ಕ್ ಮಾಡುವುದಾಗಿ ಘೋಷಿಸಿ ಹೋಗಿದ್ದರು. ಅಂದಿನಿಂದ ಇಲ್ಲಿಯತನಕ ಇನ್ನು ಜಾಗ ಗುರುತಿಸಲು ಆಗಿಲ್ಲ.

ಬಿ.ಶ್ರೀರಾಮುಲು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದಾಗಲು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳದೆ ಸುಮ್ಮನೆ ಅಧಿಕಾರ ಕಳೆದರು. ಅದಕ್ಕಾಗಿ ವಾಲ್ಮೀಕಿ ಜಾತ್ರೆಯ ನಂತರ ಜಿಲ್ಲಾ ಮಟ್ಟದ ಸಭೆ ಕರೆದು ಮುಂದಿನ ತೀರ್ಮಾನ ಕೈಗೊಳ್ಳೋಣ ಎಂದು ಪ್ರಸ್ತಾಪಿಸಿದರು.

ಕೆಲವು ಪಕ್ಷದವರು ರಾಜವೀರಮದಕರಿನಾಯಕನನ್ನು ಹೈಜಾಕ್ ಮಾಡುತ್ತಿದ್ದಾರೆ. ಅದಕ್ಕೆ ನಾವುಗಳು ಅವಕಾಶ ನೀಡುವುದಿಲ್ಲ. ರಾಜ್ಯ ಬಿಜೆಪಿ ಸರ್ಕಾರಕ್ಕೆ ತಾಕತ್ತಿದ್ದರೆ ರಾಜಾವೀರಮದಕರಿನಾಯಕ ಜಯಂತಿಯನ್ನು ಆಚರಿಸಿ ರಜೆ ಘೋಷಿಸಲಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಾಯಕ ಸಮಾಜದಿಂದಲೇ ರಾಜಾವೀರಮದಕರಿನಾಯಕ ರಾಜ್ಯ ಮಟ್ಟದ ಜಯಂತಿಯನ್ನು ಆಚರಿಸುತ್ತೇವೆ.

ಮದಕರಿನಾಯಕನ ಹೆಸರೇಳಿಕೊಂಡು ರಾಜಕಾರಣ ಮಾಡಲು ಬಿಡುವುದಿಲ್ಲ. ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ವಾಲ್ಮೀಕಿ ಜಾತ್ರೆ ಮಾಡಿರಲಿಲ್ಲ. ಪರಿಶಿಷ್ಟ ವರ್ಗ ಮತ್ತು ಸೋದರ ಸಮಾಜ ಪರಿಶಿಷ್ಟ ಜಾತಿಗೆ ಮೀಸಲಾತಿ ಹೆಚ್ಚಿಸುವುದಕ್ಕಾಗಿ ರಾಜನಹಳ್ಳಿಯಿಂದ ರಾಜಧಾನಿವರೆಗೆ ಪಾದಯಾತ್ರೆ ಹೊರಟು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ ಕುಳಿತಾಗಲೆ ನಮ್ಮ ಜನಾಂಗದ ಶಕ್ತಿ ಏನೆಂಬುದು ನನಗೆ ಗೊತ್ತಾಯಿತು.
ಸಮ್ಮಿಶ್ರ ಸರ್ಕಾರವಿದ್ದಾಗ ನಾಗಮೋಹನ್‍ದಾಸ್ ವರದಿ ಜಾರಿಯಾಯಿತು ಎಂದು ಹೇಳಿದರು.

ನಾಯಕ ಜನಾಂಗದಲ್ಲಿ ಸಂಘಟನೆ ಜಾಗೃತಿ ಕೊರತೆಯಿದೆ. ಸಂವಿಧಾನದ ಹಕ್ಕುಗಳನ್ನು ಪಡೆದುಕೊಳ್ಳಲು ನಮ್ಮ ಸಮುದಾಯದವರನ್ನು ಜಾಗೃತರನ್ನಾಗಿಸುವ ಉದ್ದೇಶದಿಂದ ವಾಲ್ಮೀಕಿ ಜಾತ್ರೆ ಮಾಡಲಾಗುತ್ತಿದೆ. ಈಗಾಗಲೆ ರಾಜ್ಯದ 80 ತಾಲ್ಲೂಕುಗಳಲ್ಲಿ ಪ್ರವಾಸ ಮಾಡಿ 81 ನೇ ತಾಲ್ಲೂಕು ಚಿತ್ರದುರ್ಗಕ್ಕೆ ಬಂದಿದ್ದೇನೆ ಎಲ್ಲರೂ ತನು, ಮನ, ಧನ ಅರ್ಪಿಸಿ ವಾಲ್ಮೀಕಿ ಜಾತ್ರೆಯನ್ನು ಯಶಸ್ವಿಗೊಳಿಸಿ ಎಂದು ನಾಯಕ ಸಮುದಾಯದವರಲ್ಲಿ ಮನವಿ ಮಾಡಿದ ಪ್ರಸನ್ನಾನಂದ ಸ್ವಾಮೀಜಿ ನಾಯಕ ಸಮಾಜದವರನ್ನು ಯಾಮಾರಿಸುವ ಪ್ರಯತ್ನ ಮಾಡಿದರೆ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆಂದು ರಾಜಕೀಯ ಪಕ್ಷದವರನ್ನು ಎಚ್ಚರಿಸಿದರು.

ಜಾತಿಯ ಕಾರಣಕ್ಕಾಗಿ ಶತಶತಮಾನಗಳಿಂದ ಅವಕಾಶ ವಂಚಿತರಾಗಿರುವ ಎಸ್ಸಿ, ಎಸ್ಟಿ. ಜನಾಂಗಕ್ಕೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಪ್ರಾತಿನಿಧ್ಯ ನೀಡುವುದಕ್ಕಾಗಿ ಸಂವಿಧಾನದ ಕೆಲವು ಪರಿಚ್ಛೇದದಲ್ಲಿ ಅನುಕೂಲ ಕಲ್ಪಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ 151 ಜಾತಿಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಅವಕಾಶ ಒದಗಿಸಿದ್ದಾರೆ.
ಚುನಾವಣೆಯಲ್ಲಿ ನಮ್ಮ ಜನಾಂಗದ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದ ಮೇಲೆ ಆಳುವ ಸರ್ಕಾರಗಳು ಹಿತ ಕಾಪಾಡುವುದನ್ನು ಮರೆಯುತ್ತಿವೆ. ಅದಕ್ಕಾಗಿ ಜಾಗೃತರನ್ನಾಗಿಸುವುದಕ್ಕಾಗಿ ಫೆ.8, 9 ರಂದು ವಾಲ್ಮೀಕಿ ಗುರುಪೀಠದಲ್ಲಿ ವಾಲ್ಮೀಕಿ ಜಾತ್ರೆ ನಡೆಸಲಾಗುವುದು.

ಸಮುದಾಯ, ಜಾತಿ ಜನಾಂಗದ ವಿಚಾರ ಬಂದಾಗ ಪಕ್ಷ ಭೇದ ಮರೆತು ಎಲ್ಲರೂ ಒಂದಾಗಬೇಕು. ಸಂವಿಧಾನದ ಹಕ್ಕು ಪಡೆಯುವುದೆ ನಿಜವಾದ ಜಾಗೃತಿ. ರಾಜ್ಯದಲ್ಲಿ ಐವತ್ತು ಲಕ್ಷದಷ್ಟು ನಾಯಕ ಜನಾಂಗದವರಿದ್ದಾರೆ. ಒಂದು ಜಾತಿಯವರು ಅಕ್ರಮವಾಗಿ ಪರಿಶಿಷ್ಟ ವರ್ಗದ ಸರ್ಟಿಫಿಕೇಟ್ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಒಂದು ಜಾತಿಯನ್ನು ಎಸ್ಟಿ.ಗೆ ಸೇರಿಸಿರುವುದಾಗಿ ಬಹಿರಂಗವಾಗಿ ಹೇಳಿದ್ದರೂ ನಮ್ಮ ಜನಾಂಗದ 9 ಶಾಸಕರು ಧ್ವನಿ ಎತ್ತದೆ ಸುಮ್ಮನಿರುವುದು ದೊಡ್ಡ ದುರಂತ. ಅಸಂವಿಧಾನಿಕವಾಗಿ ಸರ್ಟಿಫಿಕೇಟ್ ತೆಗೆದುಕೊಳ್ಳುವವರ ವಿರುದ್ದ ಮೊದಲು ಸಂಘಟಿತರಾಗೋಣ ಎಂದು ನಾಯಕ ಜನಾಂಗಕ್ಕೆ ಸ್ವಾಮೀಜಿ ಕರೆ ನೀಡಿದರು.
ವಾಲ್ಮೀಕಿ ಜಾತ್ರೆ ಸಮಿತಿ ಅಧ್ಯಕ್ಷರಾಗಿ ಚಿತ್ರದುರ್ಗ ನಗರಸಭೆ ಸದಸ್ಯ ವೆಂಕಟೇಶ್‍ರವರನ್ನು ಆಯ್ಕೆ ಮಾಡಲಾಯಿತು.

ನಾಯಕ ಜನಾಂಗದ ಮುಖಂಡರುಗಳಾದ ಹೆಚ್.ಜೆ.ಕೃಷ್ಣಮೂರ್ತಿ, ಹರ್ತಿಕೋಟೆ ವೀರೇಂದ್ರಸಿಂಹ, ಡಾ.ಹೆಚ್.ಗುಡ್ಡದೇಶ್ವರಪ್ಪ, ಕಲ್ಲವ್ವನಾಗತಿಹಳ್ಳಿ ತಿಪ್ಪೇಸ್ವಾಮಿ, ಸೊಂಡೆಕೆರೆ ಶ್ರೀನಿವಾಸ್, ಜೆ.ಎನ್.ಕೋಟೆ ಗುರುಸಿದ್ದಪ್ಪ, ಸಿದ್ದಲಿಂಗಪ್ಪ, ಪ್ರಶಾಂತ್ ಕೂಲಿಕಾರ್, ಬಾಲೇನಹಳ್ಳಿ ತಿಪ್ಪೇಸ್ವಾಮಿ, ಸರ್ವೆಬೋರಣ್ಣ, ವಕೀಲರುಗಳಾದ ಎಂ.ಮೂರ್ತಿ, ಅಶೋಕ್‍ಬೆಳಗಟ್ಟ, ಜಯಣ್ಣ, ಓಬಳೇಶ್, ನಗರಸಭೆ ಸದಸ್ಯ ದೀಪು, ಮಾಜಿ ಸದಸ್ಯ ತಿಪ್ಪೇಸ್ವಾಮಿ, ಗೌರಿ ರಾಜ್‍ಕುಮಾರ್, ಮಲ್ಲಿಕಾರ್ಜುನ್, ಕವನ ರಾಘವೇಂದ್ರ, ಮಂಜುಳ, ದೇವರಾಜ್ ಸೇರಿದಂತೆ ನಾಯಕ ಜನಾಂಗದ ಅನೇಕ ಪ್ರಮುಖರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೀಟರ್ ಬಳಸದೆಯೇ‌ಚಳಿಗಾಲದಲ್ಲಿ ಮನೆಯನ್ನು ಬೆಚ್ಚಗಿರುವಂತೆ ಮಾಡಬಹುದು..!

ಈ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಅತ್ಯಧಿಕವಾಗಿ ಸುರಿದ ಪರಿಣಾಮ ಈ ಬಾರಿ ಚಳಿಯೂ ಜಾಸ್ತಿ ಇರಲಿದೆ. ಕಳೆದ ವರ್ಷಕ್ಕಿಂತ ಅತ್ಯಧಿಕವಾಗಿರಲಿದೆ. ಈಗಾಗಲೇ ಚಳಿಗಾಲ ಶುರುವಾಗಿದೆ ಕೂಡ. ಚಳಿಗಾಲದಲ್ಲಿ ಮನೆಯೆಲ್ಲಾ ತಂಪಾಗಿರುತ್ತದೆ. ಕೆಲವೊಬ್ಬರಿಗೆ

ಹರ್ನಿಯಾ ಎಂದರೇನು ? ಸಮಸ್ಯೆಗಳು, ಲಕ್ಷಣಗಳು ಮತ್ತು ಪರಿಹಾರ : ಇಲ್ಲಿದೆ ಸಂಪೂರ್ಣ ಮಾಹಿತಿ…!

ಸುದ್ದಿಒನ್ | ಹರ್ನಿಯಾ ಎನ್ನುವುದು ಹೊಟ್ಟೆಯ ಅಥವಾ ಕಿಬ್ಬೊಟ್ಟೆಯ ಭಾಗದಲ್ಲಿ ಕಂಡುಬರುವ ವೈದ್ಯಕೀಯ ಸ್ಥಿತಿಯಾಗಿದ್ದು, ಹೊಟ್ಟೆಯ ಭಾಗದ ಅಂಗಗಳು ಸ್ನಾಯು ಅಥವಾ ಅಂಗಾಂಗಗಳ ನಡುವೆ ತೂರಿಕೊಂಡು ಚರ್ಮದ ಕೆಳ ಭಾಗದಲ್ಲಿ ಬಲೂನಿನಂತೆ ಊದಿಕೊಂಡು ಅಥವಾ

ಈ ರಾಶಿಯವರು ಶತ್ರುಗಳ ಒಳಸಂಚುಗಳಿಗೆ ಪ್ರತ್ಯುತ್ತರ ನೀಡಿ

ಈ ರಾಶಿಯವರು ಶತ್ರುಗಳ ಒಳಸಂಚುಗಳಿಗೆ ಪ್ರತ್ಯುತ್ತರ ನೀಡಿ, ಈ ರಾಶಿಯವರ ಪರಸ್ತ್ರೀ-ಪುರುಷ ಸಹವಾಸದಿಂದ ಕುಟುಂಬದಲ್ಲಿ ಕಲಹ, ಭಾನುವಾರ- ರಾಶಿ ಭವಿಷ್ಯ ನವೆಂಬರ್-24,2024 ಸೂರ್ಯೋದಯ: 06:30, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080

error: Content is protected !!