ಚಾಮರಾಜನಗರ: ಜಿಲ್ಲೆಗೆ ಭೇಟಿ ನೀಡಿದರೆ ಸಿಎಂ ಹುದ್ದೆಯನ್ನು ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆಯಿದೆ, ಹೀಗಾಗಿ ಸಿಎಂ ಸ್ಥಾನ ಅಲಂಕರಿಸಿದವರು ಚಾಮರಾಜನಗರಕ್ಕೆ ಬರುವುದಕ್ಕೆ ಹಿಂಜರಿಕೆ ಮಾಡುತ್ತಿದ್ದರು. ಆದರೆ ಇಂದು ಆ ಮೂಢನಂಬಿಕೆಗೆ ಸೆಡ್ಡು ಹೊಡೆದು ಸಿಎಂ ಬೊಮ್ಮಾಯಿ ಅವರು ಚಾಮರಾಜನಗರಕ್ಕೆ ಭೇಟಿ ನೀಡಿದ್ದಾರೆ.
ಜಿಲ್ಲೆಯ ಅಂಬೇಡ್ಕರ್ ಭವನದಲ್ಲಿ 1100 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ, ಮಾತನಾಡಿದ, ಸಿಎಂ ಬೊಮಮಾಯಿ ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತೆ ಎಂಬ ಮೂಢನಂಬಿಕೆ ನನ್ನಲ್ಲಿಲ್ಲ. ಇಲ್ಲಿಗೆ ಬಂದರೆ ಅಧಿಕಾರ ಹೋಗಲ್ಲ, ಪುಣ್ಯವಂತರಾಗುತ್ತಾರೆ. ಪುಣ್ಯ ಇನ್ನು ಹೆಚ್ಚಾಗಲಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಕೈಗಾರಿಕಾ ಕ್ರಾಂತಿ ಮಾಡಲಿದ್ದು, ಯುವಕರು ಮತ್ತು ಬಡವರಿಗೆ ಉದ್ಯೋಗ ಸಿಗಲಿದೆ ಎಂದಿದ್ದಾರೆ.
ನಮ್ಮ ಪಕ್ಷ ಸತ್ಯ ಮತ್ತು ಆತ್ಮಸಾಕ್ಷಿ ಮೇಲೆ ಅಧಿಕಾರ ನಡೆಸುತ್ತಿದೆ. ಜನರ ಪರವಾಗಿ, ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದೇವೆ. ಈ ಹಿಂದೆ ನಕಾರಾತ್ಮಕ ಸರ್ಕಾರಗಳಿದ್ದವು. ಒಂದು ಸರ್ಕಾರದ ವೈಫಲ್ಯವನ್ನು ತೋರಿಸಿ ಮತ್ತೊಂದು ಸರ್ಕಾರ ಬರುತ್ತಾ ಇತ್ತು. ಈಗ ನಮ್ಮದು ಸಕಾರಾತ್ಮಕ ಸರ್ಕಾರ. ಅಭಿವೃದ್ದಿ ಕೆಲಸಗಳನ್ನು ತೋರಿಸಿ, ಜನರ ಬಳಿ ಹೋಗುತ್ತಿದ್ದೇವೆ. ಈಗ ಜನರ ಕಲ್ಯಾಣವಾಗುತ್ತಿದೆ. ಅಸಾಧ್ಯವೆನಿಸಿದ್ದನ್ನು ಸಾಧ್ಯ ಮಾಡಿ ತೋರಿಸಿದ್ದೇವೆ ಎಂದಿದ್ದಾರೆ.