ಬೆಂಗಳೂರು: ಹತ್ತನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಇರಲಿದೆ ಎಂಬ ಕಾರಣಕ್ಕೆ ಮನೆಯಲ್ಲಿ ಪೋಷಕರು, ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ 8 ಮತ್ತು 9ನೇ ತರಗತಿಗೆ ಒತ್ತಡ ಶುರು ಮಾಡಿಕೊಳ್ಳುತ್ತಾ ಇದ್ದರು. ಆದರೆ ಈ ಬಾರಿ ಆ ನಿಯಮ ಬದಲಾಗಿದೆ. ಈ ವರ್ಷದಿಂದ ಐದು ಮತ್ತು ಎಂಟನೇ ತರಗತಿ ಮಕ್ಕಳಿಗೆ ವಾರ್ಷಿಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಸಂಬಂಧ ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.
ಮಕ್ಕಳ ಕಲಿಕಾ ಗುಣಮಟ್ಟ ಯಾವ ರೀತಿ ಇದೆ ಎಂಬುದನ್ನು ತಿಳಿದುಕೊಳ್ಳಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ. ಹೀಗಾಗಿ ಈ ವರ್ಷದಿಂದ ಐದು ಮತ್ತು ಎಂಟನೇ ತರಗತಿಗೇನೆ ಪಬ್ಲಿಕ್ ಪರೀಕ್ಷೆಯ ಮಾದರಿಯಲ್ಲಿಯೇ ಪರೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ.
ಪರೀಕ್ಷಾ ಪ್ರಕ್ರಿಯೆಗೆ ವಿದ್ಯಾರ್ಥಿಗಳಿಂದ ಯಾವುದೇ ರೀತಿಯ ಶುಲ್ಕಗಳನ್ನು ವಿಧಿಸಿಲ್ಲ. ಕ್ಲಸ್ಟರ್ ಹಂತದಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ. 8ನೇ ತರಗತಿ ಪರೀಕ್ಷೆಯಲ್ಲಿ ಒಂದು ಕೊಠಡಿಯಲ್ಲಿ 50 ಮಕ್ಕಳು ಇರಲಿದ್ದಾರೆ. ಇನ್ನು 5ನೇ ತರಗತಿ ಪರೀಕ್ಷೆ ನಡೆಯುವಾಗ 25 ಮಕ್ಕಳು ಇರಲಿದ್ದಾರೆ. ಕ್ಲಸ್ಟರ್ ವ್ಯಾಪ್ತಿಯಲ್ಲಿ ಶಿಕ್ಷಕರನ್ನು ಅದಲು ಬದಲು ಮಾಡಬೇಕೆಂದು ಆದೇಶದಲ್ಲಿ ಸೂಚನೆ ನೀಡಲಾಗಿದೆ.