ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆ ತಮಿಳುನಾಡು, ಆಂಧ್ರಪ್ರದೇಶದಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ಈ ಸೈಕ್ಲೋನ್ ಮಳೆಗೆ ನಾಲ್ಕು ಜನ ಈಗಾಗಲೇ ಬಲಿಯಾಗಿದ್ದಾರೆ. ಸಾಕಷ್ಟು ಹಾನಿ ಕೂಡ ಆಗಿದೆ. ಇನ್ನು ಸೈಕ್ಲೋನ್ ಎಫೆಕ್ಟ್ ಕರ್ನಾಟಕಕ್ಕೂ ತಟ್ಟಿದೆ. ಕಳೆದ ಎರಡು ದಿನದಿಂದ ಚಳಿಯೂ ಹೆಚ್ಚಾಗಿದೆ. ಬೆಂಬಿಡದೆ ತುಂತುರು ಮಳೆ ಸುರಿಯುತ್ತಲೆ ಇದೆ.
ತುಮಕೂರು ಜಿಲ್ಲೆಯಲ್ಲೂ ಮಳೆ ಜೋರಾಗಿದೆ. ಹೀಗಾಗಿ ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆಗೆ ಮಳೆರಾಯನ ಅಡ್ಡಿಯಾಗಿದೆ. ನಾಳೆಯಿಂದ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಿಂದ ರಥಯಾತ್ರೆ ಹೊರಡಬೇಕಿತ್ತು. ಆದರೆ ಮಳೆಯ ಕಾರಣದಿಂದ ರಥಯಾತ್ರೆಯನ್ನು ನಾಲ್ಕು ದಿನಗಳ ಕಾಲ ಮುಂದೂಡಿಕೆ ಮಾಡಲಾಗಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕುಮಾರಸ್ವಾಮಿ, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದೆ. ಹೀಗಾಗಿ ತುಮಕೂರು ಸೇರಿದಂತೆ ರಾಜ್ಯದ ಒಳನಾಡು ಭಾಗದಲ್ಲಿ ಮಳೆ ಸುರಿಯುತ್ತಿದೆ. ಈ ಕಾರಣಕ್ಕೆ ಪಂಚರತ್ನಯಾತ್ರೆಯನ್ನು ಮುಂದೂಡಲಾಗಿದೆ. ಪೂರ್ವ ನಿಗದಿಯಂತೆ ತುಮಕೂರೊನ ಚಿಕ್ಕನಾಯಕನಹಳ್ಳಿಯಿಂದ ರಥಯಾತ್ರೆ ಶುರುವಾಗಬೇಕಿತ್ತು. ಆದರೆ ಯೆಲ್ಲೋ ಅಲರ್ಟ್ ಘೋಷಣೆಯಾಗಿರುವ ಕಾರಣ ಅನಿವಾರ್ಯ ಕಾರಣದಿಂದ ನಿಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 15 ರಂದು ಮಾಗಡಿಯಲ್ಲಿ ರಥಯಾತ್ರೆ ಆರಂಭವಾಗಲಿದೆ. ಇನ್ನು ಡಿಸೆಂಬರ್ 27ಕ್ಕೆ ರಥಯಾತ್ರೆ ತುಮಕೂರಿಗೆ ಬರಲಿದೆ. ತುರುವೆಕೆರೆ, ಚಿಕ್ಕನಾಯಕನಹಳ್ಳಿ, ತುಮಕೂರು ಗ್ರಾಮಾಂತರದ ಭಾಗದಲ್ಲಿ ಅಂದಿನಿಂದ ಜೆಡಿಎಸ್ ಪಂಚರತ್ನ ರಥಯಾತ್ರೆ ಸಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.