ಗುಜರಾತ್ ಸೋಲಿಗೆ ಕಾರಣ ತಿಳಿಸಿದ ಸಿದ್ದರಾಮಯ್ಯ..!

suddionenews
2 Min Read

 

ಬೆಂಗಳೂರು: ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಮೋದಿ ಮತ್ತು ಅಮಿತ್ ಶಾ ಮೇನಿಯಾ ಏಳನೇ ಬಾರಿಗೂ ಮುಂದುವರೆದಿದೆ. ಗೆಲುವಿಗಾಗಿ ಹರಸಾಹಸ ಮಾಡಿದರು ಕಾಂಗ್ರೆಸ್ ಸೋಲು ಕಂಡಿದೆ. ಈ ಸೋಲಿನ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ.

ಗುಜರಾತ್ ನಲ್ಲಿ ಬಿಜೆಪಿ ಗೆದ್ದಿರುವುದಕ್ಕೆ ಯಾವುದೇ ರೀತಿಯ ಆಶ್ಚರ್ಯವಿಲ್ಲ. ಆದರೆ ಆಮ್ ಆದ್ಮಿ ಪಕ್ಷ ಸ್ಪರ್ಧೆ ಮಾಡಿದ್ದರಿಂದ ಬಹುತೇಕ ನಮ್ಮ ವೋಟುಗಳನ್ನೇ ಪಡೆದುಕೊಂಡಿದೆ. ಇದು ಬಿಜೆಪಿಯ ಗೆಲುವಿಗೆ ಹೆಚ್ಚಿನ ಕಾರಣವಾಗಿದೆ. ಇನ್ನು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇದ್ದಿದ್ದರಿಂದ ನಮಗೆ ಸ್ವಲ್ಪ ಅನುಕೂಲವಾದಂತೆ ಆಗಿದೆ ಎಂದು ಎಎಪಿ ವಿರುದ್ಧ ಕಿಡಿಕಾರಿದ್ದಾರೆ.

ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಗುಜರಾತ್‌ ನಲ್ಲಿ ಬಿಜೆಪಿ ಗೆದ್ದಿರುವುದರಲ್ಲಿ ಆಶ್ಚರ್ಯ ಇಲ್ಲ, ಆಮ್‌ ಆದ್ಮಿ ಪಕ್ಷದವರು ಸ್ಪರ್ಧೆ ಮಾಡಿ, ಬಹುತೇಕ ಕ್ಷೇತ್ರಗಳಲ್ಲಿ ನಮ್ಮ ಮತಗಳನ್ನೇ ಕಬಳಿಸಿದ್ದಾರೆ. ಇದು ಬಿಜೆಪಿಯ ಗೆಲುವಿಗೆ ಹೆಚ್ಚು ಸಹಕಾರಿಯಾಗಿದೆ ಎಂಬುದರಲ್ಲಿ ಯಾವ ಸಂಶಯವಿಲ್ಲ. ಹಿಮಾಚಲ ಪ್ರದೇಶದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇದ್ದುದ್ದು ನಮಗೆ ಸ್ವಲ್ಪ ಮಟ್ಟಿಗೆ ಅನುಕೂಲವಾಗಿದೆ.

ಒಂದು ರಾಜ್ಯದ ಚುನಾವಣಾ ಫಲಿತಾಂಶ ಇನ್ನೊಂದು ರಾಜ್ಯದ ಚುನಾವಣಾ ಫಲಿತಾಂಶದ ಮೇಲೆ ಯಾವ ಪ್ರಭಾವವನ್ನೂ ಬೀರಲ್ಲ. ಹಾಗೆ ಯೋಚಿಸುವುದಾದರೆ ದೆಹಲಿ ಪಾಲಿಕೆ ಚುನಾವಣೆಯ ಫಲಿತಾಂಶ ಬೇರೆ ರಾಜ್ಯಗಳ ಮೇಲೆ ಪ್ರಭಾವ ಬೀರುತ್ತದಾ? ಆಯಾ ರಾಜ್ಯದ ಸಮಸ್ಯೆಗಳು ಮತ್ತು ಸ್ಥಳೀಯ ವಿಚಾರಗಳ ಮೇಲೆ ಫಲಿತಾಂಶ ನಿರ್ಧಾರವಾಗುತ್ತದೆ. ನಮ್ಮ ರಾಜ್ಯದಲ್ಲಿ ಅತೀ ಭ್ರಷ್ಟ ಸರ್ಕಾರವಿದೆ, ಇಲ್ಲಿ ಕಾಂಗ್ರೆಸ್‌ ಪಕ್ಷ ಸಂಘಟನಾ ದೃಷ್ಟಿಯಿಂದ ಹೆಚ್ಚು ಶಕ್ತಿಶಾಲಿಯಾಗಿದೆ. ಹಾಗಾಗಿ ಗುಜರಾತ್‌ ಚುನಾವಣಾ ಫಲಿತಾಂಶ ಇಲ್ಲಿನ ಚುನಾವಣೆಯ ಮೇಲೆ ಯಾವ ಪ್ರಭಾವ ಬೀರದು.

ಗುಜರಾತಿನಲ್ಲಿ ಬಿಜೆಪಿ ಪಕ್ಷವೇ ಆಮ್‌ ಆದ್ಮಿ ಪಕ್ಷಕ್ಕೆ ಹಣ ನೀಡಿ ಕಾಂಗ್ರೆಸ್‌ ಮತಗಳನ್ನು ಒಡೆಯುವ ತಂತ್ರ ಮಾಡಿದೆ ಎಂಬ ಸುದ್ದಿ ಇದೆ. ಇದೇ ರೀತಿ ಜೆಡಿಎಸ್‌ ಜೊತೆ ಬಿಜೆಪಿ ನಮ್ಮ ರಾಜ್ಯದಲ್ಲಿ ತಂತ್ರಗಾರಿಕೆ ಮಾಡಬಹುದು, ಆದರೆ ಇದರಿಂದ ಅವರಿಬ್ಬರಿಗೂ ಯಾವ ಲಾಭವಾಗಲ್ಲ.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ. ರಾಜ್ಯ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ನಿಷ್ಕ್ರಿಯತೆ ಇವುಗಳು ಚುನಾವಣೆಯಲ್ಲಿ ಮುಖ್ಯವಾಗಲಿದೆ. ಲಂಚ ನೀಡದೆ ಯಾವ ಕೆಲಸಗಳು ಇಲ್ಲಿ ಆಗುತ್ತಿಲ್ಲ, 40% ಕಮಿಷನ್‌ ಸರ್ಕಾರ ಗುಜರಾತ್‌ ನಲ್ಲಿ ಇದೆ ಯಾರೂ ಹೇಳಿಲ್ಲ, ಆದರೆ ರಾಜ್ಯದ ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಕುಖ್ಯಾತಿ ಗಳಿಸಿದೆ.

ರಾಜ್ಯದಲ್ಲಿ ಚುನಾವಣೆ ಗೆಲ್ಲಲು ಯಾವ ತಂತ್ರಗಾರಿಕೆಯೂ ಬೇಡ, ನಾವು ಸುಮ್ಮನೆ ಇದ್ದರೂ ಗೆಲ್ಲುತ್ತೇವೆ. ಈ ಬಾರಿ ಬಿಜೆಪಿಯನ್ನು ಸೋಲಿನಿಂದ ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ. ನರೇಂದ್ರ ಮೋದಿ ಅವರು ವಾಸ ಮಾಡುವ ದೆಹಲಿಯಲ್ಲೇ ಅವರ ಹವಾ ಇಲ್ಲ. ಇನ್ನು ಇಲ್ಲಿ ಇರೋಕೆ ಸಾಧ್ಯನಾ? ಎಂದು ಪ್ರಶ್ನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *