ಡಿಸೆಂಬರ್ 18ರಂದು ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಒನಕೆ ಓಬವ್ವ ಜಯಂತಿ: ಶಾಸಕ ನೆಹರು ಚ.ಓಲೇಕಾರ ಹೇಳಿಕೆ

2 Min Read

ಮಾಹಿತಿ ಮತ್ತು ಫೋಟೋ ಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಡಿ.7) : ಐತಿಹಾಸಿಕ ಕಲ್ಲಿನಕೋಟೆ ಚಿತ್ರದುರ್ಗ ನಗರದ ಶ್ರೀ ಮುರುಘಾ ರಾಜೇಂದ್ರ ಕ್ರೀಡಾಂಗಣದಲ್ಲಿ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ಇದೇ ಡಿಸೆಂಬರ್ 18ರಂದು ರಾಜ್ಯಮಟ್ಟದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಾವೇರಿ ಶಾಸಕರು ಹಾಗೂ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ನೆಹರು ಚ.ಓಲೇಕಾರ ಹೇಳಿದರು.

ನಗರದ ಶ್ರೀ ಮುರುಘಾ ರಾಜೇಂದ್ರ ಕ್ರೀಡಾಂಗಣದಲ್ಲಿ ಬುಧವಾರ ರಾಜ್ಯಮಟ್ಟದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದ ವೇದಿಕೆ ನಿರ್ಮಾಣದ ಭೂಮಿಪೂಜೆ ನೆರವೇರಿಸಿ, ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕಳೆದ ವರ್ಷ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವು ವಿಧಾನಸೌಧದ ಬಾಕ್ವೆಂಟ್ ಹಾಲ್‍ನಲ್ಲಿ ಅದ್ದೂರಿಯಾಗಿ ನಡೆದಿತ್ತು. ಈ ಬಾರಿಯ ರಾಜ್ಯಮಟ್ಟದ ಒನಕೆ ಓಬವ್ವ ಜಯತ್ಯುಂತ್ಸವ ಕಾರ್ಯಕ್ರಮ ಚಿತ್ರದುರ್ಗ ಜರುಗಲಿದ್ದು, ಈ ಜಯಂತಿ ಕಾರ್ಯಕ್ರಮಕ್ಕೆ ಸುಮಾರು 1 ಲಕ್ಷ ಜನರು ಭಾಗವಹಿಸಲಿದ್ದಾರೆ ಎಂದರು.

ರಾಜ್ಯದ ವಿವಿಧೆಡೆಗಳಿಂದ ಮಹಿಳೆಯರು, ಪುರುಷರು, ಮಕ್ಕಳು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಡಿಸೆಂಬರ್ 18ರಂದು ಬೆಳಿಗ್ಗೆ 9ಕ್ಕೆ ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಮೆರವಣಿಗೆಯು ಪ್ರಾರಂಭವಾಗಲಿದೆ.

ಈ ಮೆರವಣಿಗೆಯಲ್ಲಿ ಪೂರ್ಣಕುಂಭ, ವಾದ್ಯವೃಂದಗಳೊಂದಿಗೆ ಓನಕೆ ಓಬವ್ವನ ಭಾವಚಿತ್ರದ ಬೃಹತ್ ಮೆರವಣಿಗೆ ನಡೆಯಲಿದೆ. ಮೆರವಣಿಗೆ ಸಾಗುವ ಮಾರ್ಗದಲ್ಲಿನ ಮಹನೀಯರ ಪುತ್ಥಳಿಗಳಿಗೆ ಮಾಲಾರ್ಪಣೆ ಹಾಗೂ ಪುಷ್ಪನಮನ ಸಲ್ಲಿಸಲಾಗುವುದು.
ನಂತರ ಅಂದು ಮಧ್ಯಾಹ್ನ 1ಕ್ಕೆ ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ.

ಈ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್, ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಸಚಿವ ಬಿ.ಶ್ರೀರಾಮುಲು ಸೇರಿದಂತೆ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಓನಕೆ ಓಬವ್ವ ಜಯಂತಿ ಅಂಗವಾಗಿ ಓನಕೆ ಓಬವ್ವ ಅವರ ವಂಶಸ್ಥರಿಗೆ ಸನ್ಮಾನ, ವಿವಿಧ ಕ್ಷೇತ್ರಗಳಲ್ಲಿ ಅದ್ವೀತಿಯ ಸಾಧನೆ ತೋರಿದ ಸಾಧಕರಿಗೂ ಸನ್ಮಾನ ಮಾಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದ ಅವರು, ಜಯಂತಿ ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ಉಪಾಹಾರ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಎಸ್.ಪಿ ರುದ್ರಮುನಿ, ಛಲವಾದಿ ಮಹಾಸಭಾದ ಛಲವಾದಿ ಕುಮಾರ್, ಮುಂಖಡರಾದ ಚೆಲುವರಾಜ್, ತಿಪ್ಪೇಸ್ವಾಮಿ, ಭಾರ್ಗವಿ ದ್ರಾವಿಡ್, ದಯಾನಂದ, ನವೀನ್ ಚಾಲುಕ್ಯ, ಯಶವಂತ್, ನಾಗರಾಜ್, ಗೌರಣ್ಣ, ಶಂಭು ಕಳಸದ,ನವೀನ್,  ಪ್ರಹ್ಲಾದ್ ಸೇರಿದಂತೆ ಮತ್ತಿತರರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *