ಜ್ಯಾತ್ಯಾತೀತವಾಗಿ ಧರ್ಮಮೀರಿ ಶಿಕ್ಷಣ ನೀಡುವ ವ್ಯವಸ್ಥೆ ರೂಪಿಸಬೇಕು : ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ

2 Min Read

ಮಾಹಿತಿ ಮತ್ತು ಫೋಟೋ ಕೃಪೆ  : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ.ಡಿ.01: ಶೈಕ್ಷಣಿಕ ವ್ಯವಸ್ಥೆಯಲ್ಲಿ ಧಾರ್ಮಿಕ ಭಾವನೆ ಮಧ್ಯಪ್ರವೇಶ ಮಾಡಬಾರದು. ಆರ್ಥಿಕ ಪರಿಸ್ಥಿತಿ ಆಧರಿಸಿ ಮಕ್ಕಳಲ್ಲಿ ಮೇಲು ಕೀಳು ಎಂಬ ಭಾವನೆ ಕಾಣಿಸಬಾರದು. ಶಾಲೆಗಳಲ್ಲಿ ಸಾಮಾಜಿಕವಾಗಿ ಒಂದೇ ಮನೋಭಿಕೆಯಲ್ಲಿ ಮಕ್ಕಳು ಶಿಕ್ಷಣ ಪಡೆಯಬೇಕು. ಜ್ಯಾತ್ಯಾತೀತವಾಗಿ ಧರ್ಮ ಮೀರಿ ಒಳ್ಳೆ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಸರ್ಕಾರಗಳು ರೂಪಿಸಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯಖಾತೆ ಸಚಿವ ಎ.ನಾರಾಯಣ ಸ್ವಾಮಿ ಹೇಳಿದರು.

ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಪದವಿ ಕಾಲೇಜಿನಲ್ಲಿ ಗುರುವಾರ ವೇದಾಂತ ಫೌಂಡೇಷನ್ ವತಿಯಿಂದ ನಿರ್ಮಿಸಲಾದ ಕಾಂಪೌಡ್ ಹಾಗೂ ನೈರ್ಮಲ್ಯ ಸಂಕೀರ್ಣ ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಖಾಸಗಿಕರಣದಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಕಂದಕ ನಿರ್ಮಾಣವಾಗಿದೆ.‌ಇದು ಸಮಾಜದ ಸ್ವಾಸ್ಥ್ಯಕ್ಕೆ ಒಳ್ಳೆಯದಲ್ಲ. ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಸಂಹಿತೆ ಪಾಲನೆ ಆಗಬೇಕು. ವಕ್ಫ್ ಬೋರ್ಡ್‌ನಿಂದ ಮುಸ್ಲಿಂ ಮಹಿಳೆಯರ ಶಿಕ್ಷಣಕ್ಕಾಗಿ ಕಾಲೇಜು ಸ್ಥಾಪನೆ ಕುರಿತು ರಾಜ್ಯ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದರು.

ಚಿತ್ರದುರ್ಗ ಕ್ಷೇತ್ರದಲ್ಲಿ ಕೇಂದ್ರೀಯ ವಿದ್ಯಾಲಯ ಕೊರತೆ ಬಹಳ ದಿನಗಳಿಂದ ಇತ್ತು. ಕೇಂದ್ರೀಯ ವಿದ್ಯಾಲಯ ಪ್ರಾರಂಭ ಮಾಡಲು, ಮಂಜೂರಾತಿಗೆ ಅವಶ್ಯ ಕಡತಗಳನ್ನು ರವಾನಿಸಲಾಗಿದೆ. ಕೇಂದ್ರ ಸರ್ಕಾರದ ನಿಯಮಾನುಸಾರ 10‌ ಎಕರೆ ಭೂಮಿ ಮಂಜೂರು ಸಹ ಮಾಡಲಾಗಿದೆ. ಮೊದಲು ಕೇಂದ್ರೀಯ ವಿದ್ಯಾಲಯ ಅರಂಭಿಸಲು ಮಂಜೂರಾತಿ ನೀಡಿ, ಸರ್ಕಾರಿ ಅಥವಾ ಇತರೆ ಕಟ್ಟಡಗಳಲ್ಲಿ ಪ್ರಾರಂಭ ಮಾಡಿ, ಅನಂತರ ಶಾಲಾ ಕಟ್ಟಡ ನಿರ್ಮಾಣ ಮಾಡಿ ಶಾಶ್ವತ ಕೇಂದ್ರೀಯ ವಿದ್ಯಾಲಯ ಪ್ರಾರಂಭ ಮಾಡಲು ಅವಶ್ಯ ಅನುದಾನ ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತದೆ. ಇದರಂತೆ ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಸ್ಥಳ ವೀಕ್ಷಣೆ ಸಂದರ್ಭದಲ್ಲಿ, ಶಾಲೆ ಆರಂಭಿಸಲು ಅವಶ್ಯವಾದ ತರಗತಿ ಕೊಠಡಿ, ವಿದ್ಯುತ್, ಕಾಂಪೌಡ್ ಕೊರತೆ ಇರುವುದು ಕಂಡುಬಂತು. ಇದನ್ನು ಸರಿಪಡಿಸಲು ಬೇಕಾದ ಅನುದಾನವನ್ನು ವೇದಾಂತ ಮೈನ್ಸ್ ನೀಡಿ, 6 ಕೋಠಡಿಗಳನ್ನು, 3 ಅಂತಸ್ತುಗಳಲ್ಲಿ ಶೌಚಾಲಯ ನಿರ್ಮಾಣ ಮಾಡಿ, ವಿದ್ಯುತ್ ಹಾಗೂ ಕಾಂಪೌಡ್ ನಿರ್ಮಿಸಿದ್ದಾರೆ. ಕಟ್ಟಡಕ್ಕೆ ಬಣ್ಣ ಹೊಡಿಸಲಾಗಿದೆ. ಈ ಮಂಜೂರು ಮಾಡಲಾದ ಭೂಮಿಯಲ್ಲಿ 66 ಕೆ.ವಿ.ವಿದ್ಯುತ್ ಲೈನ್ ಹಾದುಹೋಗಿದೆ. ಇದನ್ನು ತೆರವುಗೊಳಿಸಿಲು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ತುಮಕೂರು -ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಭೂ ಸ್ವಾಧೀನಕ್ಕಾಗಿ ಕೇಂದ್ರ ಸರ್ಕಾರದ ರೈಲ್ವೇ ಇಲಾಖೆ ರೂ.150 ಕೋಟಿಗಳನ್ನು ನೀಡಿದೆ. ಭೂ ಸ್ವಾಧೀನ ಪ್ರಕ್ರಿಯೆ ಚಾಲನೆಯಲ್ಲಿದೆ. ಫೆಬ್ರವರಿ ವೇಳೆಗೆ ನೇರ ರೈಲು ಮಾರ್ಗಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ, ಉಪವಿಭಾಗಧಿಕಾರಿ ಆರ್.ಚಂದ್ರಯ್ಯ, ಸರ್ಕಾರ ವಿಜ್ಞಾನ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಹನುಮಂತರಾಯ, ತಹಶಿಲ್ದಾರರ ಸತ್ಯನಾರಾಯಣ, ವೇದಾಂತ ಪೌಂಡೇಷನ್‌ನ ಶ್ರೀಶೈಲ ಗೌಡ, ನಾರಾಯಣ.ಪಿ, ರಾಮನ್ ರಂಜನ್ ದಾಸ್, ರವಿನಾಯಕ್,‌ಯತಿರಾಜು, ಸಂತೋಷ್, ದೇವಂಗಾನ ಸೇರಿದಂತೆ ಮತ್ತಿತರರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *