ವರದಿ ಮತ್ತು ಫೋಟೋ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ : ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವಂತ ಪರಿಸ್ಥಿತಿ ಬಂದಿರುವುದರಿಂದ ಪೋಷಕರುಗಳು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸಬೇಕು. ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸಿದಾಗ ಮಾತ್ರ ಕನ್ನಡವನ್ನು ಉಳಿಸಿ ಬೆಳೆಸಬಹುದು ಎಂದು ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಾಸವಿ ಮಹಲ್‍ನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ದ್ರಾವಿಡ ಭಾಷೆ ಕುಟುಂಬಕ್ಕೆ ಸೇರಿದ ಕನ್ನಡ ಅತ್ಯಂತ ಪ್ರಾಚೀನವಾದುದು. ಸುಸಜ್ಜಿತ ಹಾಗೂ ಸುಂದರ ಲಿಪಿ ಕನ್ನಡ. ಕುಮಾರವ್ಯಾಸ, ರಾಘವಾಂಕ, ರನ್ನ, ಪಂಪ ಇನ್ನು ಅನೇಕ ಕವಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.
ಕದಂಬರು ಕರ್ನಾಟಕಕ್ಕೆ ಬಂದ ಮೇಲೆ ಕನ್ನಡ ಭಾಷೆ ಬೆಳೆಯಿತು. ಒಂದು ಕಾಲದಲ್ಲಿ ಸಾಮರಸ್ಯದಿಂದ ಇದ್ದ ಕನ್ನಡಿಗರು ಮತ್ತು ತಮಿಳಿನವರು ಈಗ ತೋಳುಮುದರುವಂತಾಗಿದೆ. ಕನ್ನಡ ಸಾಹಿತ್ಯವನ್ನು ಬೇರೆ ಭಾಷೆಯವರು ಮೆಚ್ಚಿಕೊಳ್ಳುತ್ತಿದ್ದರು ಎಂದು ತಿಳಿಸಿದರು.
ವಿಶಿಷ್ಠವಾದ ಭಾಷೆ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿದೆ. ಕನ್ನಡದ ಬಗ್ಗೆ ನಿಜವಾಗಿಯೂ ಎಲ್ಲರಲ್ಲಿ ಜಾಗೃತಿ ಅಭಿಮಾನ ಮೂಡಿದಾಗ ಮಾತ್ರ ಕನ್ನಡ ರಾಜ್ಯೋತ್ಸೋವ ಆಚರಣೆಗೆ ಮೆರಗು ಸಿಕ್ಕಂತಾಗುತ್ತದೆ ಎಂದು ನುಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಸಮಾರಂಭ ಉದ್ಘಾಟಿಸಿ ಮಾತನಾಡುತ್ತ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿರುವುದರಿಂದ ದೇಶದ ಇತರೆ ಭಾಷೆಗಳಿಗಿಂತ ಅಗ್ರಮಾನ್ಯ ಸ್ಥಾನ ಪಡೆದಿದೆ. ಎಲ್ಲೆಡೆ ಇಂಗ್ಲಿಷ್ ಬಳಕೆಯಾಗುತ್ತಿರುವುದರಿಂದ ಕನ್ನಡ ಕಾನೂನಿನ ಭಾಷೆಯಾಗಬೇಕು.
ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಸಮಗ್ರ ಭಾಷಾ ಕಾಯಿದೆ ಮಂಡಿಸಲಿರುವುದರಿಂದ ಹೆಚ್ಚಿನ ಪ್ರೋತ್ಸಾಹ ಮತ್ತು ಬೆಂಬಲ ಸಿಕ್ಕಂತಾಗುತ್ತದೆ ಎಂದು ಹೇಳಿದರು.
ಕನ್ನಡದ ಪದಗಳನ್ನು ನಿರಂತರವಾಗಿ ಬಳಕೆ ಮಾಡುವುದರಿಂದ ಬಾಳಿಕೆ ಮತ್ತು ಅಸ್ತಿತ್ವವನ್ನು ಉಳಿಸಿಕೊಳ್ಳಬಹುದು ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಮಲಿಂಗಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ವೀರಕರಿಯಣ್ಣ ಕೃತಿ ಸಾಹಿತಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಪರಮೇಶ್ವರಪ್ಪ ಜಿ. ಆರ್ಯವೈಶ್ಯ ಸಂಘದ ಅಧ್ಯಕ್ಷ ಎಲ್.ಈ.ಶ್ರೀನಿವಾಸಬಾಬು, ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕಿ ಡಾ.ಜಿ.ಕೆ.ಪ್ರೇಮ ಇವರುಗಳು ವೇದಿಕೆಯಲ್ಲಿದ್ದರು.
ಕೈಗಾರಿಕೋದ್ಯಮಿ ಎಂ.ಕೆ.ತಾಜ್‍ಪೀರ್. ಸಾಹಿತಿ ಭರಮಸಾಗರದ ಶ್ರೀಮತಿ ಗೀತಾ ಇವರುಗಳನ್ನು ಸನ್ಮಾನಿಸಲಾಯಿತು.
ಗುರುಕುಲ ಶಾಲೆ ಮಕ್ಕಳಿಂದ ಸಾಂಸ್ಕೃತಕ ಕಾರ್ಯಕ್ರಮ ನಡೆಯಿತು.
ಪ್ರೊ.ಹೆಚ್.ಲಿಂಗಪ್ಪ, ಆರ್ಥಿಕ ಚಿಂತಕ ಪ್ರೊ.ಜಿ.ಎನ್.ಮಲ್ಲಿಕಾರ್ಜುನಪ್ಪ, ನಿವೃತ್ತ ಪ್ರಾಚಾರ್ಯರಾದ ಜೆ.ಯಾದವರೆಡ್ಡಿ ಇನ್ನು ಅನೇಕರು ಸಮಾರಂಭದಲ್ಲಿದ್ದರು.