ವರದಿ ಮತ್ತು ಫೋಟೋ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ನ.28): ಹಿಂದುತ್ವದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಕೋಮುವಾದಿ ಬಿಜೆಪಿ ಈಗ ವೋಟ್ ಕಳ್ಳತನಕ್ಕೆ ಕೈಹಾಕಿದೆ. ಮುಸಲ್ಮಾನರ ಮತಗಳನ್ನು ಮತಪಟ್ಟಿಯಿಂದ ಡಿಲಿಟ್ ಮಾಡಿಸುವ ಕೆಲಸ ಮಾಡುತ್ತಿರುವುದರ ವಿರುದ್ದ ಕಾರ್ಯಕರ್ತರು, ಮುಖಂಡರುಗಳು ಎಚ್ಚೆತ್ತುಕೊಂಡು ಪ್ರತಿ ಮನೆ ಮನೆಗೆ ಹೋಗಿ ಮತದಾನದ ಪಟ್ಟಿಯನ್ನು ಸರಿಪಡಿಸುವ ಕೆಲಸ ಮಾಡಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿನಂತಿಸಿದರು.
ಮದಕರಿಪುರದಿಂದ ಸೋಮವಾರ ಆರಂಭಗೊಂಡ ಭಾರತ್ ಜೋಡೋ ಸಂವಿಧಾನ ಬಚಾವ್ ಪಾದಯಾತ್ರೆಯಲ್ಲಿ ಭಾಗವಹಿಸಿದ ಡಿ.ಕೆ.ಶಿವಕುಮಾರ್ ಕನಕ ವೃತ್ತದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಇಡೀ ಭಾರತವನ್ನು ಒಗ್ಗೂಡಿಸಲು ರಾಹುಲ್‍ಗಾಂಧಿ ಭಾರತ್ ಜೋಡೋ ಪಾದಯಾತ್ರೆ ಕೈಗೊಂಡಿದ್ದಾರೆ. ಅಂಬೇಡ್ಕರ್ ದೇಶಕ್ಕೆ ಕೊಡುಗೆಯಾಗಿ ನೀಡಿರುವ ಸಂವಿಧಾನದಲ್ಲಿ ಎಲ್ಲಾ ಜಾತಿ ಧರ್ಮದವರು ಸಮಾನವಾಗಿ ಬದುಕುವ ಹಕ್ಕಿದೆ. ಪ್ರತಿ ಬೂತ್‍ಗೂ ಹೋಗಿ ನಾವೆಲ್ಲಾ ಒಗ್ಗಟ್ಟಾಗಿದ್ದೇವೆನ್ನುವುದನ್ನು ಜನತೆಗೆ ತೋರಿಸಬೇಕು ಎಂದು ಮುಖಂಡರುಗಳಿಗೆ ತಾಕೀತು ಮಾಡಿದ ಡಿ.ಕೆ.ಶಿವಕುಮಾರ್ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಆರಕ್ಕೆ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.
ಸಂವಿಧಾನವನ್ನು ಉಳಿಸಿ ಭಾರತವನ್ನು ಜೋಡಿಸುವುದಕ್ಕಾಗಿ ರಾಹುಲ್‍ಗಾಂಧಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 3570 ಕಿ.ಮೀ.ಪಾದಯಾತ್ರೆಯಲ್ಲಿ ತೊಡಗಿಕೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಐದು ದಿನಗಳ ಕಾಲ ನಡೆದಾಗ ಹಿರಿಯೂರಿನಿಂದ ಹಿಡಿದು ಬಳ್ಳಾರಿ ಗಡಿಯವರೆಗೆ ಇರುವೆಯತರ ನಡೆದು ಇಡೀ ದೇಶದ ಗಮನ ಸೆಳೆದಿದ್ದೀರ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಬಡವರು, ಎಲ್ಲಾ ಜಾತಿಯವರಿಗಾಗಿ ಕಾಂಗ್ರೆಸ್ ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದೆ. ಇಂದಿರಾಗಾಂಧಿ ದೇಶದ ಪ್ರಧಾನಿಯಾಗಿದ್ದಾಗ ಬ್ಯಾಂಕ್‍ಗಳನ್ನು ರಾಷ್ಟ್ರೀಕರಣಗೊಳಿಸಿ ಬಡವನು ಬ್ಯಾಂಕ್‍ನಲ್ಲಿ ವ್ಯವಹರಿಸುವಂತ ಅವಕಾಶ ಕಲ್ಪಿಸಿದರು. ಬಂಗಾರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಆರಾಧನಾ ಯೋಜನೆ ಕೊಟ್ಟರು.
ಮನಮೋಹನ್‍ಸಿಂಗ್ ದೇಶದ ಪ್ರಧಾನಿಯಾಗಿದ್ದಾಗ ಆಹಾರ ಭದ್ರತೆ ಒದಗಿಸಿದರು. ರಾಜೀವ್‍ಗಾಂಧಿಯವರಲ್ಲಿದ್ದ ದೂರದೃಷ್ಟಿಯಿಂದ ಈಗ ಎಲ್ಲರ ಕೈಯಲ್ಲಿ ಮೊಬೈಲ್ ಹರಿದಾಡುತ್ತಿದೆ. ಬಿಜೆಪಿ.ಇಂತಹ ಒಂದಾದರೂ ಮಾಡಿದೆಯಾ ಎಂದು ಪ್ರಶ್ನಿಸಿದರು?
ನರೇಗಾ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಎರಡು ಮೂರು ಕೋಟಿ ರೂ.ಗಳನ್ನು ನೀಡಿದೆ. ಇದರಿಂದ ಹೊಲಗಳಲ್ಲಿ ಬದು ನಿರ್ಮಾಣ, ಚೆಕ್‍ಡ್ಯಾಂ, ನೆಲ ಸಮತಟ್ಟುಮಾಡಿಕೊಳ್ಳಲು ಅನುಕೂಲವಾಗಿದೆ. ಉಳುವವನೆ ಭೂಮಿ ಒಡೆಯ ಕಾಯಿದೆ ಜಾರಿಗೆ ತಂದಿದ್ದು, ಕಾಂಗ್ರೆಸ್. ಬಿಜೆಪಿ.ಗೆ ಹಿಂದುತ್ವವೊಂದೆ ಅಜೆಂಡಾ. ಇದೆ ನಮಗೆ ಕೋಮುವಾದಿಗಳಿಗೂ ಇರುವ ವ್ಯತ್ಯಾಸ ಎಂದರು.
ಎ.ಐ.ಸಿ.ಸಿ. ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ರಾಜೇಶ್ ಮಾತನಾಡಿ ಸಂವಿಧಾನವನ್ನು ಕತಂ ಮಾಡಲು ಹೊರಟಿರುವ ಬಿಜೆಪಿ.ವಿರುದ್ದ ದೇಶದ ಜನತೆಯನ್ನು ಜಾಗೃತಿಗೊಳಿಸಿ ಸಂವಿಧಾನವನ್ನು ರಕ್ಷಿಸಲು ರಾಹುಲ್‍ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್‍ಜೋಡೋ ಪಾದಯಾತ್ರೆ ಹೊರಟಿದ್ದಾರೆ. ಕಾರ್ಯಕರ್ತರನ್ನು ಲೀಡರ್ ಮಾಡಬೇಕೆಂಬುದು ರಾಹುಲ್ ಉದ್ದೇಶ. ಎಲ್ಲಾ ಜಾತಿ ಧರ್ಮದವರಿಗೂ ಸಂವಿಧಾನದಲ್ಲಿ ಸಮಾನತೆ ನೀಡಲಾಗಿದೆ. ಹಾಗಾಗಿ ಪ್ರತಿಯೊಬ್ಬರು ಸಂವಿಧಾನವನ್ನು ರಕ್ಷಣೆ ಮಾಡಬೇಕಿದೆ ಎಂದು ಹೇಳಿದರು.
ಬಿಜೆಪಿ.ಯ ಅಪಪ್ರಚಾರಗಳಿಗೆ ನಾವು ಹೆದರುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದೆ ತರುತ್ತೇವೆ. ಕೋಮುವಾದಿ ಬಿಜೆಪಿ.ಕಾಂಗ್ರೆಸ್ ಮುಕ್ತ ದೇಶ ಮಾಡಲು ಹೊರಟಿದೆ. ಅದಕ್ಕೆ ಕಾರ್ಯಕರ್ತರು ಅವಕಾಶ ಕೊಡಬಾರದು. ಮಂದಿರ, ಮಸೀದಿ, ಹಿಂದುತ್ವದ ಹೆಸರಿನಲ್ಲಿ ರಾಜಕಾರಣ ಮಾಡಿ ಜಾತಿ ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡುತ್ತಿರುವ ಮನುವಾದಿಗಳಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ಕೋಡಬೇಕಿರುವುದರಿಂದ ಈಗಿನಿಂದಲೆ ಸಿದ್ದತೆ ಮಾಡಿಕೊಳ್ಳಿ ಎಂದು ಕಾರ್ಯಕರ್ತರು ಮುಖಂಡರುಗಳಲ್ಲಿ ಮನವಿ ಮಾಡಿದರು.
ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಮಾಜಿ ಶಾಸಕರುಗಳಾದ ಎ.ಉಮಾಪತಿ, ತಿಪ್ಪೇಸ್ವಾಮಿ, ಮಾಜಿ ಸಚಿವ ಡಿ.ಸುಧಾಕರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಬಿ.ಟಿ.ಜಗದೀಶ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್, ಜಿಲ್ಲಾಧ್ಯಕ್ಷ ಮೋಹನ್ ಪೂಜಾರಿ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ನಂದಿನಿಗೌಡ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್, ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಜಯಣ್ಣ, ವಿವಿಧ ವಿಭಾಗಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕಾರ್ಯಕರ್ತರು ಈ ಸಂದರ್ಭದಲ್ಲಿದ್ದರು.