ಬೆಂಗಳೂರು: ಇತ್ತೀಚೆಗೆ ಬಿಜೆಪಿ ಸರ್ಕಾರ ಹಾಲಿನ ದರವನ್ನು ಹೆಚ್ಚಳ ಮಾಡಿದೆ. ಪ್ರತಿ ಲೀಟರ್ ಗೆ 3 ರೂಪಾಯಿ ದರ ಹೆಚ್ಚಳ ಮಾಡಿದೆ. ಇದು ನೇರವಾಗಿ ರೈತರ ಅಕೌಂಟ್ ಗೆ ಹೋಗುತ್ತೆ ಎಂದು ಭರವಸೆ ನೀಡಿದ್ದಾರೆ. ಸಾಕಷ್ಟು ದಿನಗಳಿಂದ ರೈತರ ಬೇಡಿಕೆಯಾಗಿತ್ತು, ಹೀಗಾಗಿ ದರ ಹೆಚ್ಚಳ ಮಾಡಲಾಗಿದೆ ಎನ್ನಲಾಗಿದೆ.
ಸರ್ಕಾರದಿಂದ ಹಾಲಿನ ದರ ಹೆಚ್ಚಳ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಟ್ವೀಟ್ ಮಾಡಿ, ಕಾಲೆಳೆದಿದ್ದಾರೆ. ಹಾಲು ಉತ್ಪಾದನೆಯನ್ನು ಹೆಚ್ಚಿಸುತ್ತೇವೆ ಎಂದಿತ್ತು ಬಿಜೆಪಿ. ಆದರೆ ಹೆಚ್ಚಿಸಿದ್ದು ಮಾತ್ರ ಹಾಲಿನ ದರವನ್ನ, ಮೇವು, ಹಿಂಡಿಗಳ ದರವನ್ನ, ರೈತರಿಗೆ ಸಂಕಷ್ಟವನ್ನ, ಹಾಲಿನ ಮೌಲ್ಯವರ್ಧನೆಗೆ, ರಫ್ತಿಗೆ ಒತ್ತುಕೊಡದ ಸರ್ಕಾರ ರೈತರಿಗೆ ಹಾಲಾಹಲವನ್ನು ಕೊಡುತ್ತಿದೆ. ಹಾಲಿನ ಬೆಂಬಲ ಬೆಲೆ ಕೊಡದಿರುವುದೇಕೆ @BJP4Karnataka? ಎಂದು ಪ್ರಶ್ನಿಸಿದೆ.
ಚಿಲುಮೆ ಸಂಸ್ಥೆಯ ಬಗ್ಗೆಯೂ ಟ್ವೀಟ್ ಮಾಡಿರುವ ಕಾಂಗ್ರೆಸ್, ಚಿಲುಮೆ ಸಂಸ್ಥೆಯಲ್ಲಿ ಲೆಟರ್ ಹೆಡ್, ಚೆಕ್ ದೊರಕಿದ ವಿಚಾರವಾಗಿ ಸಚಿವ @drashwathcn ಅವರ ವಿಚಾರಣೆ ಮಾಡುವ ದಮ್ಮು, ತಾಕತ್ತು ಇಲ್ಲವೇ @BSBommai ಅವರೇ? ಸಚಿವರಿಗೂ ಚಿಲುಮೆಗೂ ಏನು ಸಂಬಂಧ? ಬೇರೆಲ್ಲವನ್ನೂ ಪುಂಖಾನುಪುಂಖವಾಗಿ ಮಾತಾಡುವ ಮುಖ್ಯಮಂತ್ರಿಗಳು ಈ ಬಗ್ಗೆ ಮೌನ ಮುರಿಯದಿರುವುದೇಕೆ? ಸಿಎಂ ಕೂಡ ಈ ಅಕ್ರಮದಲ್ಲಿ ಪಾಲು ಹೊಂದಿರುವರೇ? ರಾಜಕೀಯ ಒತ್ತಡದಿಂದ ಚಿಲುಮೆ ಸಂಸ್ಥೆಗೆ ಸಹಕರಿಸಿದ್ದೆವು ಎಂದು ಅಧಿಕಾರಿಗಳು ಹೇಳಿದ್ದಾರೆ.
ಒತ್ತಡ ಹಾಕಿದ ರಾಜಕೀಯದವರು ಯಾರು? ಅವರ ಹಿತಾಸಕ್ತಿ ಏನಿತ್ತು? ಚಿಲುಮೆ ಸಂಸ್ಥೆಯ ಹಣದ ಮೂಲ ಯಾವುದು? ಚೆಕ್, ಲೆಟರ್ ಹೆಡ್ ಸಿಕ್ಕಿರುವ ಸಂಗತಿಯನ್ನು ಬಚ್ಚಿಡುತ್ತಿರುವುದೇಕೆ? ಅಕ್ರಮಗಳ ಮಹಾಪೋಷಕ @BSBommai ಅವರು ಜನತೆಗೆ ಉತ್ತರಿಸಬೇಕು ಎಂದಿದ್ದಾರೆ.