ಕೋಲಾರ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಈ ಮಧ್ಯೆ ಮೂರು ಪಕ್ಷಗಳು ಅಧಿಕಾರದ ಚುಕ್ಕಾಣಿಗಾಗಿ ಜಪ ಮಾಡುತ್ತಿದ್ದಾರೆ. ಜನರ ಬಳಿ ಮತ ಕೇಳುವುದಕ್ಕೆ ಭರವಸೆಯ ಪಟ್ಟಿಗಳನ್ನು ಸಿದ್ಧ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಜಿಲ್ಲೆ ಜಿಲ್ಲೆಯನ್ನು ಸುತ್ತುತ್ತಾ, ಪಟ್ಟಿಯಲ್ಲಿರುವ ಭರವಸೆಯ ಬಾಣಗಳನ್ನು ಒಂದೊಂದಾಗಿ ಬಿಡುತ್ತಿದ್ದಾರೆ. ಇದೀಗ ಮಾಜಿ ಸಿಎಂ ಕುಮಾರಸ್ವಾಮಿ ಅಧಿಕಾರಕ್ಕೆ ಬಂದರೆ ವೀರಶೈವರಿಗೂ ಡಿಸಿಎಂ ಸ್ಥಾನ ಕೊಡುತ್ತಾರಂತೆ.
ಕೋಲಾರದಿಂದ ಜೆಡಿಎಸ್ ಪಂಚರತ್ನ ಯಾತ್ರೆಯನ್ನು ಆರಂಭ ಮಾಡಿದೆ. ಈ ಯಾತ್ರೆಯ ಉದ್ಧಕ್ಕೂ ಜನರ ನೋವು-ನಲಿವುಗಳನ್ನು ಕೇಳುತ್ತಾ ಸಾಗುತ್ತಿದ್ದಾರೆ ಕುಮಾರಸ್ವಾಮಿಯವರು. ಇದರ ನಡುವೆ ನಡುವೆಯೇ ಭರವಸೆಗಳ ಸುರಿಮಳೆಯನ್ನು ಸುರಿಸುತ್ತಿದ್ದಾರೆ. ಇತ್ತಿಚೆಗೆ ನಾವೂ ಬಹುಮತದಿಂದ ಅಧಿಕಾರಕ್ಕೆ ಬಂದರೆ ದಲಿತ ಡಿಸಿಎಂ ಮಾಡುವ ಭರವಸೆಯನ್ನು ನೀಡಿದ್ದರು.
ಇಂದು ಕೂಡ ಪಂಚರತ್ನ ಯಾತ್ರೆ ಕೋಲಾರದಲ್ಲಿ ಸಾಗಿದ್ದು, ಚಿಂತಾಮಣಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ನನ್ನದು ಭಾಗ್ಯಗಳ ಕಾರ್ಯಕ್ರಮವಲ್ಲ. ಬಡವರ ಬದುಕನ್ನು ಕಟ್ಟಿಕೊಡುವ ಯಾತ್ರೆ ಎಂದಿದ್ದಾರೆ. ಇದೆ ವೇಳೆ, ಸಾಲ ಮನ್ನಾ ಕ್ರೆಡಿಗೂ ಕಾಂಗ್ರೆಸ್ ಗೂ ಸಲ್ಲಬೇಕು. ಕಾಂಗ್ರೆಸ್ ಸರ್ಕಾರದ ವೇಳೆ ಜಾರಿಯಾದ ಭಾಗ್ಯಗಳಿಗೆ ಹಣ ನಿಲ್ಲಬಾರದು. ಗಲಾಟೆ ಮಾಡಿ ಆಗ ಹಣಕಾಸು ಇಲಾಕೆಯನ್ನು ತೆಗೆದುಕೊಂಡಿದ್ದೆ. ಯಾರೋ ಕಟ್ಟಿದ ಗೂಡನ್ನು ಸಿದ್ದರಾಮಯ್ಯ ಅವರು ಸೇರಿದ್ದಾರೆ.
ದಲಿತರಿಗೆ ಮಾತ್ರವಲ್ಲ ವೀರಶೈವರಿಗೂ ಡಿಸಿಎಂ ಸ್ಥಾನ ನೀಡುತ್ತೇನೆ. ಕಾಟಚಾರದ ಡಿಸಿಎಂಗಳನ್ನು ಮಾಡುವುದಿಲ್ಲ. ಆ ಹುದ್ದೆಗೆ ಸ್ಥಾನಮಾನ, ಸಂಪೂರ್ಣ ಅಧಿಕಾರ ಕೊಡುತ್ತೇನೆ ಎಂದಿದ್ದಾರೆ.