ವರದಿ ಮತ್ತು ಫೋಟೋ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಡಿ.24, 25, 26 ರಂದು ದಾವಣಗೆರೆಯ ಎಂ.ಬಿ.ಎ.ಕಾಲೇಜು ಮೈದಾನದಲ್ಲಿ 23 ನೇ ಮಹಾ ಅಧಿವೇಶನ ನಡೆಯಲಿದೆ ಎಂದು ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ರಾಜಣ್ಣ ತಿಳಿಸಿದರು.
ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ವೀರಶೈವ ಲಿಂಗಾಯತರು ಎಲ್ಲರೂ ಒಂದೆ ಎಂದು ಸಾರುವುದು ಮಹಾ ಅಧಿವೇಶನದ ಉದ್ದೇಶ. ರಾಜ್ಯದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಮಹಾ ಅಧಿವೇಶನಕ್ಕೆ ಆಗಮಿಸಲಿದ್ದಾರೆ. ಐವತ್ತು ಸಾವಿರದಿಂದ ಒಂದು ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, ಪ್ರತಿ ಜಿಲ್ಲೆಯಲ್ಲಿ ವೀರಶೈವ ಲಿಂಗಾಯಿತರನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿದ್ದೇವೆಂದು ಹೇಳಿದರು.
ತಮಿಳುನಾಡಿನಿಂದಲೂ ನಮ್ಮವರು ಬರುತ್ತಾರೆ. ಮುರುಘಾಮಠದ ಪ್ರಕರಣ ಅತಿ ಸೂಕ್ಷ್ಮವಾಗಿದ್ದು, ಅದರ ಬಗ್ಗೆಯೂ ಮುಂದಿನ ದಿನಗಳಲ್ಲಿ ಚರ್ಚಿಸುತ್ತೇವೆ. ಬೆಂಗಳೂರಿನಲ್ಲಿ ನಾಲ್ಕು ಎಕರೆ ಜಾಗ ತೆಗೆದುಕೊಂಡಿದ್ದು, ವೀರಶೈವ ಲಿಂಗಾಯತ ಬಡ ಮಕ್ಕಳಿಗೆ ಹಾಸ್ಟೆಲ್ ನಿರ್ಮಾಣ ಮಾಡಲಾಗುವುದಲ್ಲದೆ ಐ.ಎ.ಎಸ್. ಐ.ಪಿ.ಎಸ್.ಪರೀಕ್ಷೆಗೆ ಕೋಚಿಂಗ್ ನೀಡಲಾಗುವುದು ಎಂದರು.
ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ದಾವಣೆಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ್ ಮಾತನಾಡಿ ಮಹಾಸಭಾ ಹುಟ್ಟಿಕೊಂಡು ಹದಿನೆಂಟು ವರ್ಷಗಳಾಗಿದ್ದು, ಅಂದಿನಿಂದ ಇಂದಿನವರೆಗೆ ಪ್ರತಿ ವರ್ಷ ಮಹಾ ಅಧಿವೇಶನ ನಡೆಸಿಕೊಂಡು ಬರುತ್ತಿದ್ದೇವೆ. ಅದರಂತೆ ಮುಂದಿನ ತಿಂಗಳು ದಾವಣಗೆರೆಯಲ್ಲಿ ನಡೆಯಲಿದೆ. ವೀರಶೈವ ಲಿಂಗಾಯತರನ್ನು ಓ.ಬಿ.ಸಿ.ಗೆ ಸೇರಿಸುವಂತೆ ರಾಜ್ಯ ಸರ್ಕಾರಕ್ಕೆ ಬೇಡಿಕೆಯಿಡಲಾಗುವುದು. ಕೇಂದ್ರ ಸರ್ಕಾರ ನಮ್ಮ ಒಳಪಂಗಡಗಳಿಗೆ ಮೀಸಲಾತಿಯನ್ನು ನೀಡಬೇಕೆಂಬುದು ನಮ್ಮ ಬೇಡಿಕೆ ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಘಟಕದ ಅಧ್ಯಕ್ಷ ಮಹಡಿ ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಜಿ.ಎನ್.ಮಹೇಶ್, ಸಂದೀಪ್, ಬಿ.ಜಿ.ರಮೇಶ್, ಕಾರ್ತಿಕ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲ ಬಸವರಾಜ್, ಆರತಿ ಮಹಡಿ ಶಿವಮೂರ್ತಿ, ಶ್ಯಾಮಲ ಶಿವಪ್ರಕಾಶ್ ಇನ್ನು ಮೊದಲಾದವರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.