ಬೆಂಗಳೂರು: ಕೊಪ್ಪಳಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರು, ಮುಂದಿನ ಚುನಾವಣೆಗೆ ಅಭ್ಯರ್ಥಿಗಳ ಘೋಷಣೆ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಅಭ್ಯರ್ಥಿಗಳ ಘೋಷಣೆ ಮಾಡುವ ಅಧಿಕಾರ ಸಿದ್ದರಾಮಯ್ಯ ಅವರಿಗೆ ಇಲ್ಲ ಎಂದಿದ್ದಾರೆ.
ನಮ್ಮ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ ಅವರು. ಅವರಿಗೆ ಘೋಷಣೆ ಮಾಡುವ ಹಕ್ಕು ಇದೆ. ಸಿದ್ದರಾಮಯ್ಯ ಅವರಿಗೆ ಅಭ್ಯರ್ಥಿಗಳ ಘೋಷಣೆ ಮಾಡುವ ಹಕ್ಕಿಲ್ಲ. ನನಗೂ ಕೂಡ ಆ ಹಕ್ಕು ಇಲ್ಲ. ಎಐಸಿಸಿಗೆ ಮಾತ್ರ ಆ ಹಕ್ಕು ಇರುವುದು. ಸಿದ್ದರಾಮಯ್ಯ ಅವರು ಯಾವ ಅರ್ಥದಲ್ಲಿ ಘೋಷಣೆ ಮಾಡಿದರೋ ಗೊತ್ತಿಲ್ಲ. ಕಳೆದ ಬಾರಿ ಸೋಲು ಕಂಡವರಿಗೆ ಸ್ಪೂರ್ತಿ ತುಂಬುವುದಕ್ಕೆ ಆ ರೀತಿ ಮಾಡಿದರಾ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ.
ಇದೇ ವೇಳೆ ಮತದಾರರ ಪಟ್ಟಿ ಹಗರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ದೂರು ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ, ಇಂದು ಮಧ್ಯಾಹ್ನದ ತನಕ ಸಮಯ ಕೇಳಿದ್ದೇವೆ. ನಮಗೆ ಕೇಂದ್ರ ಚುನಾವಣಾ ಆಯೋಗದ ಆಯುಕ್ತರೇ ಬೇಕು. ಪೊಲೀಸಿನವರು ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ. ನಮ್ಮ ಬಳಿ ಸಾಕಷ್ಟು ಮಾಹಿತಿಗಳಿದೆ. ಇದರ ಹಿಂದೆ ಯಾವ ಮಂತ್ರಿ ಇದ್ದಾರೆ..? ಕಿಂಗ್ ಪಿನ್ ಯಾರು ಎಂಬುದನ್ನು ಕಂಡು ಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.