ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ನ.19): ಪುರುಷರ ದಿನಾಚರಣೆಯಂದು ಪುರುಷರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರತ್ಯೇಕ ಕಾನೂನು ಜಾರಿಗೆ ತರುವಂತೆ ಕರ್ನಾಟಕ ರಾಜ್ಯ ನಾಗರೀಕರ ವೇದಿಕೆಯಿಂದ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರು ಹಾಗೂ ರಾಜ್ಯದ ಮುಖ್ಯಮಂತ್ರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ವಿವಿಧತೆಯಲ್ಲಿ ಏಕತೆಯುಳ್ಳ ಭಾರತದಲ್ಲಿ ಹೆಣ್ಣಿಗೆ ವಿಶೇಷವಾದ ಸ್ಥಾನಮಾನ ನೀಡಿ ಭೂಮಾತೆ ಎಂದು ಗೌರವಿಸಲಾಗುತ್ತಿದೆ. ಹೆಣ್ಣು ಅಬಲೆಯಲ್ಲ. ಸಬಲೆ ಎನ್ನುವುದನ್ನು ಸಾಕಷ್ಟು ಉದಾಹರಣೆಗಳಿವೆ. ಎಲ್ಲಾ ರಂಗಗಳಲ್ಲಿ ಪುರುಷರಷ್ಟೆ ಮಹಿಳೆ ಸಾಧನೆಗೈಯುತ್ತಿರುವುದೇ ಸಾಕ್ಷಿಯಾಗಿದೆ. ಮಹಿಳೆಯರ ರಕ್ಷಣೆಗಾಗಿಯೇ ಅನೇಕ ಕಾನೂನು ಮತ್ತು ವಿಶೇಷ ಕಾಯಿದೆಗಳನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದೆ.
ಭಾರತೀಯ ದಂಡ ಸಂಹಿತೆ, ವರದಕ್ಷಿಣೆ ಕಿರುಕುಳ ಕಾಯಿದೆ, ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಮತ್ತು ಪೋಕ್ಸೋ ಕಾಯಿದೆಯನ್ನು ಜಾರಿಗೆ ತಂದಿರುವುದು ನಿಜವಾಗಿಯೂ ನೊಂದ ಮಹಿಳೆಯರಿಗೆ ನೆರವಾಗಲಿದೆ. ಕೆಲವೊಮ್ಮೆ ಮಹಿಳೆಯರು ಈ ಕಾಯಿದೆಗಳನ್ನೆಲ್ಲಾ ದುರುಪಯೋಗಪಡಿಸಿಕೊಂಡು ಪುರುಷರ ಮೇಲೆ ಅತಿ ಹೆಚ್ಚು ವರದಕ್ಷಿಣೆ, ಲೈಂಗಿಕ ಕಿರುಕುಳ, ಹೀಗೆ ಇನ್ನು ಅನೇಕ ಸುಳ್ಳು ಪ್ರಕರಣಗಳನ್ನು ದಾಖಲಿಸಿದಾಗ ಪುರುಷ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ.
ಇನ್ನು ಕೆಲವರು ವಿಚ್ಚೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗುವುದುಂಟು. ಹಾಗಾಗಿ ಪುರುಷರಿಗೂ ರಕ್ಷಣೆ ಸಿಗುವಂತ ಕಾನೂನು ಕಾಯಿದೆಗಳನ್ನು ಜಾರಿಗೆ ತರುವಂತೆ ಕರ್ನಾಟಕ ರಾಜ್ಯ ನಾಗರೀಕರ ವೇದಿಕೆ ರಾಜ್ಯಾಧ್ಯಕ್ಷ ಬಿ.ಕೆ.ರಹಮತ್‍ವುಲ್ಲಾ ಮನವಿ ಮಾಡಿದರು.
ಕಾರ್ಯದರ್ಶಿ ಪ್ರತಾಪ್‍ಜೋಗಿ ನ್ಯಾಯವಾದಿಗಳಾದ ದಿಲ್‍ಷಾದ್ ಉನ್ನಿಸ, ಬಿ.ಕೆ.ಮನ್ಸೂರ್, ಅಜಯ್, ಅಶೋಕ್‍ಬೆಳಗಟ್ಟ, ಮಲ್ಲಿಕಾರ್ಜುನ್, ಅಂಕಿತ, ನರಸಿಂಹ, ಅಲೀಂ, ನವಾಜ್, ಸಾಧಿಕ್, ಮಹೇಶ್, ಓಂಕಾರಪ್ಪ, ಸೌಮ್ಯ, ಸಮಾಜಸೇವಕಿ ಮಮತ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪುರುಷರ ದಿನಾಚರಣೆಯನ್ನು ಕೇಕ್ ಕತ್ತರಿಸಿ ಆಚರಿಸಲಾಯಿತು.