ತೆಲಂಗಾಣ: ತಮ್ಮ ವಿರುದ್ಧ ವೈಯಕ್ತಿಕ ಟೀಕೆ ಮಾಡುವುದನ್ನು ನಿಲ್ಲಿಸದೇ ಹೋದಲ್ಲಿ ನಿಜಾಮಾಬಾದ್ ರಸ್ತೆಯಲ್ಲಿಯೇ ನಿಲ್ಲಿಸಿಕೊಂಡು ಚಪ್ಪಲಿ ತೆಗೆದುಕೊಂಡು ಹೊಡೆಯುತ್ತೀನಿ ಎಂದು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಮಗಳು ಕವಿತಾ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ಅವರು ಕವಿತಾ ಅವರು ಬಿಜೆಪಿ ಸೇರ್ಪಡೆಗೆ ಪ್ರಯತ್ನಿಸುತ್ತಿದ್ದಾರೆ. ಅವರು ಪಕ್ಷವನ್ನು ಬದಲಾಯಿಸಿದ್ದಾರೆ. ಸಿಎಂ ಅವರ ಮಗಳ ಮೇಲೆ ವ್ಯಾಪಾರ ಶುರು ಮಾಡಿದ್ದಾರೆ ಎಂದು ಹೇಳಿದ್ದರು. ಈ ಹೇಳಿಕೆಗೆ ಕವಿತಾ ಸರಿಯಾಗಿ ತಿರುಗೇಟು ನೀಡಿದ್ದಾರೆ.
ಪ್ರತಿಕ್ರಿಯೆ ನೀಡಿದ ಕವಿತಾ, ಅರವಿಂದ್ ಅವರು ಬಹಳ ಕೆಳಮಟ್ಟಕ್ಕೆ ಇಳಿದಿದ್ದಾರೆ. ಅಲ್ಲ ನಿಮ್ಮ ಬಗ್ಗೆ ನಿಮಗೆ ಏನನ್ನಿಸುತ್ತದೆ..? ಆಧಾರರಹಿತ ಕಮೆಂಟ್ ಗಳನ್ನು ಮಾಡಿದರೆ ಸರಿ ಇರುವುದಿಲ್ಲ. ಇನ್ನೊಮ್ಮೆ ವೈಯಕ್ತಿಕ ಕಾರಣಗಳನ್ನು ಇಟ್ಟುಕೊಂಡು ಕಮೆಂಟ್ ಮಾಡಿದರೆ ನಿಜಾಮಾಬಾದ್ ರಸ್ತೆಯಲ್ಲಿ ನಿಲ್ಲಿಸಿಕೊಂಡು ಚಪ್ಪಲಿಯಲ್ಲಿ ಹೊಡೆಯುತ್ತೀನಿ ಎಂದಿದ್ದಾರೆ.
ಬಹಳ ದಿನದಿಂದ ನಾನು ಸಂಯಮದಿಂದ ವರ್ತಿಸುತ್ತಿದ್ದೇನೆ. ಆದರೆ ಇನ್ನು ಸುಮ್ಮನೆ ಇರುವುದಿಲ್ಲ. ಮುಖ್ಯಮಂತ್ರಿಯಾಗಿರುವ ಕೆ ಚಂದ್ರಶೇಖರ್ ರಾವ್ ಅವರಿಗೂ ಗೌರವ ನೀಡುವುದಿಲ್ಲ. ಆ ರೀತಿಯ ಟೀಕೆಗಳನ್ನು ಮಾಡುತ್ತಿರುತ್ತಾರೆ. ಅಷ್ಟಕ್ಕೂ ಅರವಿಂದ್ ತೆಲಂಗಾಣಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ.