ವರದಿ ಮತ್ತು ಫೋಟೋ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ನ.15) : ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಹದ್ದುಬಸ್ತಿನಲ್ಲಿಡುವ ಪೊಲೀಸರು, ದೇಶ ಕಾಯುವ ಸೈನಿಕರುಗಳೇ ನಿಜವಾದ ಹೀರೋಗಳು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ತಿಳಿಸಿದರು.
ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ದೇಶದ ಜನಸಂಖ್ಯೆಯಲ್ಲಿ ಕೇವಲ ಒಂದು ಪರ್ಸೆಂಟ್‍ನಷ್ಟು ಮಾತ್ರ ಸರ್ಕಾರಿ ಕೆಲಸದಲ್ಲಿದ್ದಾರೆ. ಹಾಗಾಗಿ ಸರ್ಕಾರಿ ನೌಕರಿ ಮಾಡುವುದು ಒಂದು ಪುಣ್ಯದ ಕೆಲಸ. ಎಲ್ಲರಿಗೂ ಸೇವೆ ಮಾಡಲು ಅವಕಾಶವಿರುವುದಿಲ್ಲ. ಅನೇಕ ಸಮಸ್ಯೆ, ಸವಾಲುಗಳಿಂದ ನೊಂದವರು ಮಾತ್ರ ಪೊಲೀಸರ ಬಳಿ ಬರುತ್ತಾರೆ. ಪೊಲೀಸರು ಅನೇಕ ಸವಾಲು, ಕಷ್ಟದ ನಡುವೆ ಕೆಲಸ ಮಾಡಬೇಕಾಗುತ್ತದೆ. ಜನ ನೆಮ್ಮದಿಯಿಂದ ಇದ್ದಾರೆಂದರೆ ಆ ಕೀರ್ತಿ ಪೊಲೀಸರಿಗೆ ಸೇರುತ್ತದೆ. ದಿನದ 24 ಗಂಟೆಯೂ ಒತ್ತಡದ ನಡುವೆ ಕೆಲಸ ಮಾಡುವ ಪೊಲೀಸರು ಕೆಲವೊಮ್ಮೆ ಜೀವವನ್ನು ಪಣಕ್ಕಿಟ್ಟು ಜನ ಸಾಮಾನ್ಯರ ಪ್ರಾಣ ಆಸ್ತಿಗಳನ್ನು ಸಂರಕ್ಷಿಸಬೇಕಾಗುತ್ತದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ವರ್ಷಕ್ಕೊಮ್ಮೆಯಾದರೂ ಪೊಲೀಸರಿಗೆ ಕ್ರೀಡೆ ಅತ್ಯವಶ್ಯಕ. ಇದರಿಂದ ಮಾನಸಿಕ ಹಾಗೂ ದೈಹಿಕವಾಗಿ ಕ್ರಿಯಾಶೀಲರಾಗಿರಲು ಸಹಕಾರಿಯಾಗಲಿದೆ ಎಂದು ಹೇಳಿದರು.
ವಿಶೇಷವಾಗಿ ಪೊಲೀಸರು ಆರೋಗ್ಯಕ್ಕೆ ಮಹತ್ವ ಕೊಡಬೇಕಾಗಿರುವುದರಿಂದ ದಿನಕ್ಕೆ ಒಂದು ಗಂಟೆಯಾದರೂ ಕ್ರೀಡಾಭ್ಯಾಸದಲ್ಲಿ ತೊಡಗಬೇಕು. ಸೋಲು ಗೆಲುವಿನ ಸೋಪಾನ. ಯಾವುದೇ ಕ್ರೀಡೆಯಲ್ಲಾಗಲಿ ಮೊದಲು ಸೋತಾಗಲೆ ಗೆಲುವಿನ ಮಹತ್ವ ಗೊತ್ತಾಗುವುದು. ಇಲ್ಲಿಯವರೆಗೂ ನಾನು ಮೂರು ಸಾವಿರ ಸ್ಪರ್ಧೆಗಳಲ್ಲಿ ಭಾಗವಹಿಸಿರಬಹುದು. ಅಂದಾಜು 1500 ಮೆಡಲ್‍ಗಳನ್ನು ಪಡೆದಿದ್ದೇನೆ. ಸೋತಾಗಲೆ ತಪ್ಪಿನ ಅರಿವಾಗುವುದು. ಹುಸೇನ್ ಬೋಲ್ಟ್ ಹತ್ತು ಸೆಕೆಂಡಿನಲ್ಲಿ ನೂರು ಮೀಟರ್ ಓಡಿ ವಲ್ರ್ಡ್ ರೆಕಾರ್ಡ್ ಮಾಡಿದ್ದಾನೆ. ಗೆಲ್ಲುವತನ ಕುದುರೆ ತರಹ ಓಡಬೇಕು. ಗೆದ್ದ ಮೇಲೆ ಕುದುರೆಗಿಂತ ವೇಗವಾಗಿರಬೇಕು ಓಟ. ಸತತ ಪ್ರಯತ್ನವಿದ್ದರೆ ಯಾವುದೂ ಅಸಾಧ್ಯವಲ್ಲ. ಗೊತ್ತಿರುವ ಕ್ರೀಡೆಯನ್ನು ಸತತ ಅಭ್ಯಾಸ ಮಾಡಬೇಕು. ಯಾರು ಬೆಂಬಲಿಸಲಿ ಬಿಡಲಿ ನಿರಂತರ ಪ್ರಯತ್ನದಿಂದ ಮಾತ್ರ ಜಯ ಸಿಗುತ್ತದೆ. ಅದಕ್ಕಾಗಿ ನಿಮ್ಮ ಗುರಿ ಗೆಲುವಿನ ಕಡೆ ಇರಬೇಕೆಂದು ಪೊಲೀಸರಿಗೆ ಕರೆ ನೀಡಿದರು.
ವಾರ್ಷಿಕ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ರಕ್ಷಣಾಧಿಕಾರಿ ಕೆ.ಪರಶುರಾಮ ಮಾತನಾಡಿ ಪೊಲೀಸರಿಗೆ ದೈಹಿಕ ಸಾಮರ್ಥ್ಯ ತುಂಬಾ ಮುಖ್ಯ. ಪ್ರತಿ ವರ್ಷವೂ ಸಹೋದ್ಯೋಗಿಗಳ ಜೊತೆ ಕ್ರೀಡೆಯಲ್ಲಿ ಪಾಲ್ಗೊಳ್ಳುವುದೆಂದರೆ ಒಂದು ರೀತಿಯಲ್ಲಿ ಹಬ್ಬವಿದ್ದಂತೆ. ಬಿಡುವಿಲ್ಲದ ಕಠಿಣ ಕೆಲಸ, ರಾತ್ರಿ ಗಸ್ತು ತಿರುಗುವುದು. ಕಾನೂನು ಸುವ್ಯವಸ್ಥೆಯಲ್ಲಿ ತೊಡಗುವ ನೀವುಗಳು ಮಾನಸಿಕವಾಗಿ ಲವಲವಿಕೆಯಿಂದ ಇರಲಿ ಎನ್ನುವ ಕಾರಣಕ್ಕಾಗಿಯೇ ವಾರ್ಷಿಕ ಕ್ರೀಡಾಕೂಟ ಏರ್ಪಡಿಸುವುದು. ಇಲಾಖೆಯ ಧ್ವಜವನ್ನು ಪ್ರೌಢಿಮೆಯಿಂದ ಎತ್ತಿಹಿಡಿಯುವ ಕೆಲಸ ನಿಮ್ಮದಾಗಬೇಕು ಎಂದು ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ ಟಿ. ಮಾತನಾಡಿದರು.
ಐಮಂಗಲ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಪಾಪಣ್ಣ, ಹೆಚ್ಚುವರಿ ರಕ್ಷಣಾಧಿಕಾರಿ ಎಸ್.ಜೆ.ಕುಮಾರಸ್ವಾಮಿ ವೇದಿಕೆಯಲ್ಲಿದ್ದರು.