ವರದಿ ಮತ್ತು ಫೋಟೋ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ನ.14) : ಬಿಸಿಯೂಟ ತಯಾರಕರಿಗೆ ಪ್ರತಿ ತಿಂಗಳು ಐದನೆ ತಾರೀಖಿನಂದು ಸಂಬಳ ನೀಡುವಂತೆ ಒತ್ತಾಯಿಸಿ ಎ.ಐ.ಟಿ.ಯು.ಸಿ.ವತಿಯಿಂದ ಜಿಲ್ಲಾ ಪಂಚಾಯಿತಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಉಪ ಕಾರ್ಯದರ್ಶಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯಾಧ್ಯಕ್ಷ ಕಾಂ.ಹೊನ್ನಪ್ಪ ಪೆರಮ್ಮನವರ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ರಾಜ್ಯಾದ್ಯಂತ 6190 ಬಿಸಿಯೂಟ ತಯಾರಕರು ನಿವೃತ್ತಿಯಾಗಿದ್ದು, ತಲಾ ಒಂದು ಲಕ್ಷ ರೂ.ಹಿಡಿಗಂಟು ನೀಡುವಂತೆ ರಾಜ್ಯದ ಮುಖ್ಯಮಂತ್ರಿ ಜೊತೆ ಮಾತನಾಡಿದ್ದೇನೆ. ಇದಕ್ಕಾಗಿ 61 ಕೋಟಿ ರೂ.ಗಳಾಗುತ್ತದೆ ಎಂದು ಹಣಕಾಸು ಇಲಾಖೆ ಹೇಳಿದೆ. ಮುಂದಿನ ಬಜೆಟ್‍ನಲ್ಲಿ ವೇತನ ಹೆಚ್ಚಿಸುವಂತೆ ಚರ್ಚಿಸಿದ್ದು, ಎರಡು ಸಾವಿರ ರೂ.ಗಳನ್ನು ಜಾಸ್ತಿ ಮಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆಂದು ತಿಳಿಸಿದರು.
ಎ.ಐ.ಟಿ.ಯು.ಸಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು ಮಾತನಾಡಿ ಯಾವುದೇ ಜೀವನ ಭದ್ರತೆಯಿಲ್ಲದೆ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕರಿಗೆ ನಾಲ್ಕೈದು ತಿಂಗಳುಗಳಿಂದ ವೇತನ ನೀಡಿಲ್ಲ. ಕೇವಲ 3700 ರೂ. ಗೌರವಧನಕ್ಕೆ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಿಸುವಂತೆ ರಾಜ್ಯದ ಮುಖ್ಯಮಂತ್ರಿ ಜೊತೆ ಮಾತನಾಡಲಾಗಿದೆ. ಪಿ.ಎಫ್. ಇ.ಎಸ್.ಐ.ಜಾರಿಯಾಗಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವುದರಿಂದ ತಿಂಗಳಿಗೆ ಕನಿಷ್ಠ 31 ಸಾವಿರ ರೂ.ಗಳ ವೇತನ ಕೊಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಎ.ಐ.ಟಿ.ಯು.ಸಿ.ರಾಜ್ಯ ಮಂಡಳಿ ಸದಸ್ಯ ಟಿ.ಆರ್.ಉಮಾಪತಿ ಮಾತನಾಡುತ್ತ ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನಕ್ಕಾಗಿ ರಾಜ್ಯಾದ್ಯಂತ ಹೋರಾಟ ನಡೆಯುತ್ತಿದೆ. ಬಿಸಿಯೂಟ ತಯಾರಕರ ಮೇಲ್ವಿಚಾರಣೆಯನ್ನು ಎಸ್.ಡಿ.ಎಂ.ಸಿ.ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ವಹಿಸಬಾರದು. ಶಿಕ್ಷಣ ಇಲಾಖೆಯೇ ಮೇಲ್ವಿಚಾರಣೆ ನೋಡಿಕೊಳ್ಳುವಂತೆ ಸರ್ಕಾರ ನಿಯಮ ರೂಪಿಸಬೇಕೆಂದು ಒತ್ತಾಯಿಸಿದರು.
ಎ.ಐ.ಟಿ.ಯು.ಸಿ.ರಾಜ್ಯ ಸಂಚಾಲಕ ಕಾಂ.ಸಿ.ವೈ.ಶಿವರುದ್ರಪ್ಪ, ಜಿಲ್ಲಾ ಸಂಚಾಲಕ ಕಾಂ.ದೊಡ್ಡುಳ್ಳಾರ್ತಿ ಕರಿಯಣ್ಣ, ಅಧ್ಯಕ್ಷ ಬಿ.ಬಸವರಾಜಪ್ಪ, ಕಾಂ.ಗೌರಮ್ಮ, ಕಾಂ.ಸುವರ್ಣಮ್ಮ, ಕಾಂ.ಎಸ್.ಸಿ.ಕುಮಾರ್, ಕಾಂ.ಗಿರಿಜಮ್ಮ, ಕಾಂ.ಫರ್ವಿನ್‍ತಾಜ್, ಕಾಂ.ಸತ್ಯಕೀರ್ತಿ, ಕಾಂ.ಚೇತನ್, ಕಾಂ.ನಾಗಮ್ಮ, ಕಾಂ.ರಜಿಯ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಬಿಸಿಯೂಟ ತಯಾರಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.