ಹಾಸನ: ಪ್ರಧಾನಿ ಮೋದಿ ಬೆಂಗಳೂರಿಗೆ ಬಂದು ಕೆಂಪೇಗೌಡ ಅವರ ಪ್ರತಿಮೆಯನ್ನು ಅನಾವರಣ ಮಾಡಿ ಹೋದ ಮೇಲೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ನಾಯಕರ ಮೇಲೆ ಜೆಡಿಎಸ್ ಟ್ವಿಟ್ಟರ್ ವಾಗ್ದಾಳಿ ನಡೆಸಿತ್ತು. ಕೆಂಪೇಗೌಡ ಪ್ರತಿಮೆಯ ಮೊದಲ ಪೂಜೆಗೆ ದೇವೇಗೌಡ ಅವರು ಬೇಕಾಗಿತ್ತು, ಪ್ರತಿಮೆ ಅನಾವರಣಕ್ಕೆ ಅವರು ಬೇಡವಾಗಿದ್ದಾರೆ. ಇದು ಕನ್ನಡಿಗರಿಗೆ ಮಾಡುವ ಅವಮಾನ ಎಂದೆಲ್ಲಾ ಬೇಸರ ಮಾಡಿಕೊಂಡು ಟ್ವೀಟ್ ಮಾಡಿದ್ದರು.
ಇಷ್ಟೆಲ್ಲ ಆದಾಗಲೂ ಮಾಜಿ ಪ್ರಧಾನಿ ದೇವೇಗೌಡ ಅವರು ಪ್ರತಿಕ್ರಿಯೆ ನೀಡಿರಲಿಲ್ಲ. ಆದ್ರೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ನಾನು ಈ ವಿಚಾರದಲ್ಲಿ ಏನನ್ನು ಮಾತನಾಡುವುದಿಲ್ಲ. ಯಾರು ಯಾರು ಏನೇನು ಮಾಡಿದರು ಎಂದು ವಿಶ್ಲೇಷಣೆ ಕೂಡ ಮಾಡುವುದಿಲ್ಲ ಎಂದಿದ್ದಾರೆ.
ಇನ್ನು ಜೆಡಿಎಸ್ ಆರೋಪಕ್ಕೆ ಉತ್ತರ ನೀಡಿರುವ ಬಿಜೆಪಿ ನಾಯಕರು, ಈ ಕಾರ್ಯಕ್ರಮಕ್ಕೆಂದು ಯಾವುದೇ ರೀತಿಯ ಪ್ರತ್ಯೇಕವಾಗಿ ಆಹ್ವಾನ ಪತ್ರಿಕೆಯನ್ನು ಹೊರಡಿಸಿರಲಿಲ್ಲ. ಎಲ್ಲರಿಗೂ ಕರೆ ಮಾಡುವ ಮೂಲಕ, ಪತ್ರ ಬರೆಯುವ ಮೂಲಕವೇ ಆಹ್ವಾನ ಮಾಡಲಾಗಿತ್ತು. ಸಿಎಂ ಬಸವರಾಜ್ ಬೊಮ್ಮಾಯಿ ಅವರು, ದೇವೇಗೌಡ ಅವರಿಗೂ ಪತ್ರದ ಮೂಲಕ ಆಹ್ವಾನ ನೀಡಿದ್ದಾರೆ ಎಂದಿದ್ದಾರೆ.