ಮಾಹಿತಿ ಮತ್ತು ಫೋಟೋ ಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ, (ನ.08) : ಐ.ಎ.ಎಸ್, ಐ.ಪಿ.ಎಸ್ ಸ್ಪರ್ಧಾತ್ಮಕ ಪರೀಕ್ಷೆ ಪಾಸು ಮಾಡಿ ಉನ್ನತ ಅಧಿಕಾರಿಗಳಾಗಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು.
ಮಂಗಳವಾರ ಹೊಸದುರ್ಗ ತಾಲೂಕು ಸಾಣೇಹಳ್ಳಿ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ನಿರುಗುಂದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲಾ ಆವರಣದಲ್ಲಿನ ಹಲಿಪ್ಯಾಡ್ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಸತಿ ಶಾಲಾ ವಿದ್ಯಾರ್ಥಿನಿಯರೊಂದಿಗೆ ಕೆಲ ಸಮಯ ಸಂವಾದ ನೆಡೆಸಿದರು.
ಬೆಂಗಾವಲು ಪಡೆ ವಾಹನಗಳು ತೆರಳವ ಹಾದಿಯಲ್ಲಿ ಕುಳಿತಿದ್ದ ವಿದ್ಯಾರ್ಥಿನಿಯರು ಮುಖ್ಯಮಂತ್ರಿಗಳು ನೋಡಿ ಹರ್ಷೋದ್ಗಾರದಿಂದ ಕೂಗಿ ಕೈ ಬಿಸಿದರು. ಬಸವರಾಜ ಬೊಮ್ಮಾಯಿ ಮಕ್ಕಳು ಕಂಡೊಡನೆ ವಾಹನದಿಂದ ಇಳಿದು ಅವರ ಬಳಿಗೆ ತೆರಳಿದರು.
“ನೀವೆಲ್ಲ ಯಾವ ಕ್ಲಾಸ್ ಓದುತ್ತಿದ್ದೀರಿ?” ಎಂದು ಮುಖ್ಯಮಂತ್ರಿಗಳು ವಿದ್ಯಾರ್ಥಿನಿಯರಿಗೆ ಪ್ರಶ್ನಿಸಿದರು.
ಮಕ್ಕಳು ಜೋರಾದ ದನಿಯಲ್ಲಿ 6,7,8,9,10ನೇ ತರಗತಿ ಓದುವುದಾಗಿ ಹೇಳಿದರು.
ಮಕ್ಕಳ ಉತ್ಸಾಹ ಕಂಡ ಮುಖ್ಯಮಂತ್ರಿಗಳು, ಇಷ್ಟು ಜೋರಾಗಿ ನೀವು ಕೂಗಿದರೆ, ನನ್ನ ಕಿವಿಗಳು ನೋವಾಗುತ್ತವೆ ಎಂದು ತಮಾಷೆ ಮಾಡಿ, ಒಬ್ಬರಾಗಿ ಉತ್ತರಿಸುವಂತೆ ಹೇಳಿದರು.
“ವಸತಿ ಶಾಲೆಯಲ್ಲಿ ಚೆನ್ನಾಗಿ ಊಟ ನೀಡುತ್ತಿದ್ದಾರೆ? ಎಷ್ಟು ದಿನಗಳಿಗೆ ಒಮ್ಮೆ ಊರಿಗೆ ಹೋಗಿ ಬರಲು ಅವಕಾಶ ನೀಡುತ್ತಾರೆ? ಊರಲ್ಲಿ ಸ್ನೇಹಿತರು ಸಿಗುತ್ತಾರ? ವಸತಿ ಶಾಲೆ ಸೌಲಭ್ಯ ಹೇಗಿದೆ ಎಂದು ಪ್ರಶ್ನಿಸಿದರೆ ಏನು ಹೇಳುತ್ತಿರಿ?” ಎಂದು ಮುಖ್ಯಮಂತ್ರಿಗಳು ಮಕ್ಕಳನ್ನು ಕೇಳಿದರು.
ಮಕ್ಕಳು ಊಟ ಚನ್ನಾಗಿ ನೀಡುತ್ತಾರೆ. ಊರಿನಲ್ಲಿ ಸ್ನೇಹಿತರ ಬಳಿ ವಸತಿ ಶಾಲೆ ಸೌಲಭ್ಯ ಚನ್ನಾಗಿದೆ ಎಂದು ಹೇಳುವುದಾಗಿ ಉತ್ತರಿಸಿದರು.
ನೀವೆಲ್ಲ ಚನ್ನಾಗಿ ಓದಬೇಕು. ಪೋಷಕರನ್ನು ಬಿಟ್ಟು ಬಂದಿದ್ದೀರಿ ಹೇಗೆ ಅನಿಸುತ್ತಿದೆ ನಿಮಗೆ ಎಂದು ಮಕ್ಕಳ ಯೋಗಕ್ಷೇಮವನ್ನು ಮುಖ್ಯಮಂತ್ರಿ ವಿಚಾರಿಸಿದರು. ಇದೇ ಸಂದರ್ಭದಲ್ಲಿ ಪಕ್ಕದಲ್ಲಿ ನಿಂತಿದ್ದ ಚಿತ್ರದುರ್ಗ ಜಿಲ್ಲಾಧಿಕಾರಿ ಜೆ.ಆರ್.ಜಿ.ದಿವ್ಯಪ್ರಭು ಅವರನ್ನು ಮಕ್ಕಳಿ ಮಾದರಿಯಾಗಿ ಪರಿಚಯಿಸಿ “ಇವರು ಐ.ಎ.ಎಸ್ ಪರೀಕ್ಷೆ ಪಾಸು ಮಾಡಿ ಜಿಲ್ಲಾಧಿಕಾರಿಗಳಾಗಿದ್ದಾರೆ. ಮುಂದೆ ಇನ್ನೂ ಉನ್ನತ ಹುದ್ದೆಗೆ ಏರುತ್ತಾರೆ. ಇವರ ಹಾಗೇ ನೀವು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತಯಾರು ಆಗಬೇಕು. ಉತ್ತಮ ವಿದ್ಯಾಭ್ಯಾಸ ಮಾಡಿ ಪೋಷಕರಿಗೆ,ನಾಡಿಗೆ ಕೀರ್ತಿ ತರಬೇಕು”ಎಂದು ಮಕ್ಕಳಿಗೆ ಸ್ಪೂರ್ತಿದಾಯಕ ಮಾತುಗಳನ್ನು ಆಡಿದರು. ಮಕ್ಕಳು ಹಾಗೂ ಬೋಧಕರೊಂದಿಗೆ ಪೋಟೋ ತೆಗೆಸಿಕೊಂಡರು. ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಿದ ಮಕ್ಕಳ ಸಂತಸ ಇಮ್ಮಡಿಯಾಗಿತ್ತು.
ಈ ಸಂದರ್ಭದಲ್ಲಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಹಾವೇರಿ ಗದಗ ಸಂಸದ ಶಿವಕುಮಾರ್ ಉದಾಸಿ, ಶಾಸಕರಾದ ಗೂಳಿಹಟ್ಟಿ ಶೇಖರ್, ಜಿ.ಹೆಚ್.ತಿಪ್ಪಾರೆಡ್ಡಿ, ಸುರೇಶ್, ಜಿ.ಪಂ.ಸಿಇಓ ದಿವಾಕರ, ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.